ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪುರಸಭೆಗೆ ಬೆಳಗ್ಗೆ 11ಗಂಟೆಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ಕಾಲ ದಾಖಲೆ ಪರಿಶೀಲಿಸಿದರು. ಪುರಸಭೆ ವ್ಯವಸ್ಥಾಪಕ ಮುದ್ದೆಬಿಹಾಳ ಅವರು ಅಧಿಕಾರಿಗಳು ಕೇಳಿದ ಕಡತಗಳನ್ನು ತೋರಿಸಿ, ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಲೋಕಾಯುಕ್ತ ಇನ್ಸಪೆಕ್ಟರ್ ಚಂದ್ರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಮಾಸ್ ಅಲಿಗೇಶನ್ ಬಂದಿದ್ದರಿಂದ ಪುರಸಭೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಇ-ಖಾತಾ, ಲಾಗ್ ಬುಕ್, ಕಟ್ಟಡ ಪರವಾನಗಿ, ಅಂಗಡಿಗಳ ಲೈಸೆನ್ಸ್ ದಾಖಲೆ ಸೇರಿದಂತೆ ಅನೇಕ ಕೆಲಸಗಳ ಕುರಿತಾಗಿ ಮಾಹಿತಿ ಪಡೆದುಕೊಂಡಿದ್ದೇವೆ. ಇದರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.ಲೋಕಾಯುಕ್ತ ಸಿಬ್ಬಂದಿಗಳಾದ ಗಣೇಶ ಪಾಟೀಲ, ನಾಗಪ್ಪ, ಭದ್ರೇಶ ಗೌಡರ, ಈರಣಗೌಡ ಗೌಡರ ಸೇರಿದಂತೆ ಇತರರು ಇದ್ದರು.