ಬರಗಾಲದ ಛಾಯೆ: ಮಳೆಗಾಗಿ ಕಪ್ಪೆ ಮದುವೆ

KannadaprabhaNewsNetwork |  
Published : Aug 03, 2026, 02:00 AM IST
ಬೇವಿನ ಸೊಪ್ಪು ಮತ್ತು ಹೂವಿನ ಮಾಲೆಗಳನ್ನು ಕಟ್ಟಿ, ಅದರಲ್ಲಿ ಕಪ್ಪೆಗಳನ್ನು ಇಟ್ಟು ಹೊತ್ತುಕೊಂಡು ಮೆರವಣಿಗೆ ಮಾಡಲಾಯಿತು. | Kannada Prabha

ಸಾರಾಂಶ

ಸಿರುಗುಪ್ಪ ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ದೇಶನೂರು ಗ್ರಾಮಸ್ಥರು ಮಳೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಸಿರುಗುಪ್ಪ: ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ದೇಶನೂರು ಗ್ರಾಮಸ್ಥರು ಮಳೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಮಳೆರಾಯನ ಕೃಪೆಗಾಗಿ ಹಾಗೂ ವರುಣದೇವನನ್ನು ಒಲಿಸಿಕೊಳ್ಳಲು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ''''ಕಪ್ಪೆ ಮದುವೆ'''' ಆಚರಣೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿದರು.

ಗ್ರಾಮದಲ್ಲಿ ಈ ವಿಶಿಷ್ಟ ಆಚರಣೆಯ ಭಾಗವಾಗಿ ಕಪ್ಪೆಗಳಿಗೆ ಮದುವೆ ಮಾಡಿ, ಪೂಜೆ ಸಲ್ಲಿಸಿ, ಊರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಪ್ರಮುಖರು ಮತ್ತು ಹಿರಿಯರು ಮರದಿಂದ ಮಾಡಿದ ಚಪ್ಪರ, ಹೊರೆಗೆ ಬೇವಿನ ಸೊಪ್ಪು ಮತ್ತು ಹೂವಿನ ಮಾಲೆಗಳನ್ನು ಕಟ್ಟಿ, ಅದರಲ್ಲಿ ಕಪ್ಪೆಗಳನ್ನು ಇಟ್ಟು ಹೊತ್ತುಕೊಂಡು ಮೆರವಣಿಗೆ ಮಾಡಿದರು. ತಮಟೆ ಮತ್ತು ನಾಸಿಕ್ ಬ್ಯಾಂಡ್ ವಾದ್ಯ ಮೆರವಣಿಗೆಗೆ ಕಳೆ ನೀಡಿತು.

ಮನೆಯಿಂದ ಮನೆಗೆ ತೆರಳಿ ಅಕ್ಕಿ ಸಂಗ್ರಹಿಸಿ, ಪೂಜೆ ನೆರವೇರಿಸಿದ ನಂತರ ಕಪ್ಪೆಗಳನ್ನು ಹತ್ತಿರದ ಕೆರೆ, ದೋಣಿಗೆ ಬಿಡುವ ಸಂಪ್ರದಾಯ ನಡೆಸಲಾಯಿತು. ಆಚರಣೆಯ ಬಳಿಕ ಸಾರ್ವಜನಿಕರಿಗೆ ಮಹಾಪ್ರಸಾದ (ಅನ್ನದಾನ) ವ್ಯವಸ್ಥೆಯನ್ನೂ ಮಾಡಲಾಗಿತ್ತು.

"ನಮ್ಮ ಪೂರ್ವಜರು ತೋರಿಸಿಕೊಟ್ಟ ದಾರಿಯಲ್ಲೇ ನಾವು ಈ ಆಚರಣೆಯನ್ನು ನಡೆಸುತ್ತಿದ್ದೇವೆ. ದೇವರ ಆಶೀರ್ವಾದದಿಂದ ಶೀಘ್ರವೇ ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಲಿ, " ಎಂದು ಮಂಜುನಾಥ, ಅಂಬರೀಶ, ಗ್ರಾಮಸ್ಥರು ಆಶಯ ವ್ಯಕ್ತಪಡಿಸಿದರು.

ತಾಲೂಕಿನ ಕುಡುದರಹಾಳ್ ಗ್ರಾಮದ ಮಾರಿಕಾಂಬಾ ದೇವಸ್ಥಾನದಲ್ಲಿ ತನುಬಿಂದಿಗೆ ನೀರು ಅರ್ಪಣೆ, ಬಗ್ಗೂರು ಗ್ರಾಮದ ಈಶ್ವರ ದೇವಾಲಯದಲ್ಲಿ ಮಹಿಳೆಯರಿಂದ ಭಕ್ತಿಗೀತೆಗಳ ಪಾರಾಯಣ, ನಾಗಲಾಪುರ ಗ್ರಾಮದ ವಿವಿಧ ದೇವಸ್ಥಾನದಲ್ಲಿ ಸಪ್ತಾಹ ಭಜನೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪೈಪೋಟಿ, 22 ಆಕಾಂಕ್ಷಿಗಳಿಂದ ಅರ್ಜಿ
ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗದಿರಲಿ