ಭಟ್ಕಳ: ಇಲ್ಲಿನ ಇತಿಹಾಸ ಪ್ರಸಿದ್ಧ ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಯುಗಾದಿಯ ಮಾರನೇ ದಿನ ಧ್ವಜಾರೋಹಣ ಮತ್ತು ಗರುಡನ ಪಟ ಕಟ್ಟುವುದರ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಬುಧವಾರ ಸಂಜೆ ೫.೩೦ಕ್ಕೆ ಹನುಮಂತ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮರಥವನ್ನು ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು. ದೇವಸ್ಥಾನದ ತಾಂತ್ರಿಕ ರಮಾನಂದ ಅವಬೃತ್, ಮುಖ್ಯ ಅರ್ಚಕರು ಸೇರಿದಂತೆ ಮತ್ತಿತರ ಅರ್ಚಕರು ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಿಕೊಟ್ಟರು. ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಗ್ರಾಮ ದೇವನಾದ ಹನುಮಂತನಿಗೆ ಪೂಜೆ, ಹರಕೆ ಹಾಗೂ ರಥಕಾಣಿಗೆ ಸಲ್ಲಿಸಿದರು. ರಥೋತ್ಸವದಲ್ಲಿ ಭಜನೆ, ಚಂಡೆ ವಾದ್ಯ, ಹುಲಿ ಕುಣಿತ, ತಟ್ಟಿರಾಯ, ಡಿಜೆ ಮೂಲಕ ಕುಣಿತ ಜನರ ಗಮನ ಸೆಳೆದವು.ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ, ಮಾಜಿ ಶಾಸಕ ಜೆ.ಡಿ. ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ನಾಯ್ಕ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಶ್ರೀಧರ ಮೊಗೇರ, ಶಿವರಾಮ ನಾಯ್ಕ, ಪ್ರಮುಖರಾದ ಸುರೇಂದ್ರ ಶ್ಯಾನಭಾಗ, ರಾಜೇಶ ನಾಯಕ, ಬಿಜೆಪಿ ಮುಖಂಡರಾದ ರಾಜೇಶ ನಾಯ್ಕ, ಸುಬ್ರಾಯ ದೇವಡಿಗ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಭಟ್ಕಳ ಹಾಗೂ ವಿವಿಧ ತಾಲೂಕಿನಿಂದ ಬಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್‌ನಲ್ಲಿದ್ದರು. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬ್ರಹ್ಮರಥೋತ್ಸವ ವೀಕ್ಷಿಸಲು ಊರ ಹಾಗೂ ಪರ ಊರಿನ ಸಾವಿರಾರು ಜನರು ಪಾಲ್ಗೊಂಡಿದ್ದರು. ಚೆನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥ ಎಳೆಯುವ ಪೂರ್ವದಲ್ಲಿ ವರ್ಷಂಪ್ರತಿಯಂತೆ ಈ ಸಲವೂ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯದೊಂದಿಗೆ ಮುಸ್ಲಿಂ ಸಮುದಾಯದ ಚರ್ಕಿನ್ ಕುಟುಂಬ ಹಾಗೂ ಜೈನ ಕುಟುಂಬ ಮತ್ತು ಪ್ರಭು ಅವರು ಕುಟುಂಬಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವುದರ ಜತೆಗೆ ಜಾತ್ರೆಗೆ ಆಗಮಿಸುವಂತೆ ಆಮಂತ್ರಣ ನೀಡಿದರು. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆ ಭಾವೈಕ್ಯತೆಯ ಸಂಕೇತವಾಗಿದೆ.ರಥೋತ್ಸವದ ಸಂದರ್ಭದಲ್ಲಿ ಮುಸ್ಲಿಮರು ರಸ್ತೆ ಬದಿಯಲ್ಲಿ ಹಾಗೂ ತಮ್ಮ ಮನೆ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ರಥೋತ್ಸವವನ್ನು ವೀಕ್ಷಿಸಿದರು. ಗುರುವಾರ ಅಶ್ವವಾಹನೋತ್ಸವ, ಚೂರ್ಣೊತ್ಸವ, ಅವಭೃತ ಸ್ನಾನದೊಂದಿಗೆ ಜಾತ್ರಾ ಧಾರ್ಮಿಕ ಉತ್ಸವಗಳು ಮುಕ್ತಾಯವಾಗಲಿದೆ. ರಾತ್ರಿ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಲಿದೆ.