ಶ್ರೀ ಕೃಷ್ಣನ ಮಾನವ ಪ್ರೇಮ ಸಂದೇಶಗಳು ಇಂದಿಗೂ ಪ್ರಸ್ತುತ

KannadaprabhaNewsNetwork | Published : Aug 27, 2024 1:41 AM

ಸಾರಾಂಶ

ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಪುಷ್ಪಾರ್ಚನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮನುಷ್ಯರಲ್ಲಿರುವ ಅಹಂ, ಕ್ರೂರತ್ವ ತೊಡೆದುಹಾಕುವಲ್ಲಿ ಶ್ರೀಕೃಷ್ಣನ ಮಾನವಪ್ರೇಮ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಕ್ರೂರತ್ವವನ್ನು ಹೋಗಲಾಡಿಸಲು ಶ್ರೀಕೃಷ್ಣನು ನೀಡಿದ ಮಾನವ ಪ್ರೇಮ ಸಂದೇಶಗಳ ಕೊಡುಗೆ ಅಪಾರವಾಗಿದೆ. ಶ್ರೀಕೃಷ್ಣನ ಬಾಲಲೀಲೆಗಳು ಇಂದಿಗೂ ಜನಜನಿತವಾಗಿವೆ. ಮಹಾಭಾರತದ ಮೂಲಕ ಶ್ರೇಷ್ಠ ಪಾತ್ರಗಳನ್ನು ಪರಿಚಯಿಸಿದ ಶ್ರೀಕೃಷ್ಣನ ಮಾನವ ಕಲ್ಯಾಣದ ಸಂದೇಶಗಳನ್ನು ನಾವೆಲ್ಲರು ಪಾಲಿಸಬೇಕು ಎಂದು ಕರೆ ನೀಡಿದರು.

ಶ್ರೀ ಕೃಷ್ಣ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಋಗ್ವೇದಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕೃಷ್ಣ ಎಂದರೆ ಪ್ರೇಮ, ಆನಂದ, ಅಕರ್ಷಣೆ ಎಂಬುದಾಗಿದೆ. ಇಡೀ ವಿಶ್ವಕ್ಕೆ ಪುಣ್ಯಭೂಮಿ, ಕರ್ಮಭೂಮಿಯಾಗಿರುವ ಭಾರತದಲ್ಲಿ ಅನೇಕ ಮಹಾನ್ ಪುರುಷರು, ಋಷಿಗಳು, ಸಾಧುಸಂತರು, ದಾರ್ಶನಿಕರು, ತತ್ವಜ್ಞಾನಿಗಳು, ಆಚಾರ್ಯರು, ಚಿಂತಕರು ಕಾಲಕಾಲಕ್ಕೆ ತಮ್ಮದೇ ಆದ ಮೌಲ್ಯಯುತ ಸಂದೇಶಗಳನ್ನು ನೀಡಿ ಮಾನವಕುಲದ ಕಲ್ಯಾಣಕ್ಕೆ ತಮ್ಮದೇ ಆದ ಪ್ರಭಾವ ಬೀರಿದ್ದಾರೆ. ಈ ಪೈಕಿ ಶ್ರೀಕೃಷ್ಣನ ಅವತಾರವು ಒಂದಾಗಿದೆ ಎಂದು ತಿಳಿಸಿದರು.

ಮಹಾಭಾರತದ ಕೇಂದ್ರಬಿಂದು ಶ್ರೀಕೃಷ್ಣನ ರಾಜತಾಂತ್ರಿಕ ನೀತಿ ಚಿಂತನೆಯೇ ವಿಶೇಷ, ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಮನುಷ್ಯ ದಾರಿ ತಪ್ಪಿದಾಗ, ಸಮುದಾಯದಲ್ಲಿ ಅಶಾಂತಿ ಉಂಟಾದ ಕಾಲಘಟ್ಟದಲ್ಲಿ ಸಮಾಜ ಪರಿವರ್ತಕರಾಗಿ ಬಂದವರು ಶ್ರೀಕೃಷ್ಣ. ಶ್ರೀಕೃಷ್ಣ ಜಗತ್ತಿನ ಶ್ರೇಷ್ಠ ಮನಶಾಸ್ತ್ರಜ್ಞ ಎಂದರೆ ತಪ್ಪಾಗಲಾರದು ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಹಾಗೂ ನಗರಸಭೆ ಸದಸ್ಯೆ ಮಮತ ಅವರು ಮಾತನಾಡಿದರು.

ಗಾಯಕರಾದ ಜೆ.ಬಿ.ಮಹೇಶ್ ಅವರು ಶ್ರೀಕೃಷ್ಣನ ಕುರಿತ ಗೀತೆಯನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಸಮಾಜದ ಮುಖಂಡರಾದ ಬಾಲಸುಬ್ರಮಣ್ಯಂ ಮತ್ತಿತರರಿದ್ದರು.

Share this article