ವಿವಿಧ ಬೇಡಿಕೆ ಈಡೇರಿಕೆಗಾಗಿ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork | Published : Apr 16, 2025 1:53 AM

ಸಾರಾಂಶ

ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಾರವಾರ- ಹುಬ್ಬಳ್ಳಿ ರಸ್ತೆಯ ಅಂಚಟಗೇರಿ ಗ್ರಾಮದ ಬಳಿ ಲಾರಿಗಳನ್ನು ತಡೆದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ.

ಹುಬ್ಬಳ್ಳಿ: ಡೀಸೆಲ್ ದರ ಹಾಗೂ ಟೋಲ್ ಶುಲ್ಕ ಪರಿಷ್ಕರಣೆ ಕುರಿತು ಗಡುವು ನೀಡಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಫೆಡರೇಷನ್‌ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದಿಂದ ಕರೆ ಕೊಟ್ಟಿರುವ ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಾರವಾರ- ಹುಬ್ಬಳ್ಳಿ ರಸ್ತೆಯ ಅಂಚಟಗೇರಿ ಗ್ರಾಮದ ಬಳಿ ಲಾರಿಗಳನ್ನು ತಡೆದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಇದರಿಂದ ಸಕಾಲಕ್ಕೆ ಸರಕು ಸರಂಜಾಮು ಹೋಗದೇ ರಸ್ತೆಯಲ್ಲಿ ನಿಂತಿತ್ತು. ಇದರಿಂದ ಕೊಂಚ ತೊಂದರೆಯಾಗಿದೆ.

ಈ ನಡುವೆ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘ ಈ ಪ್ರತಿಭಟನೆಗೆ ಬೆಂಬಲಿಸಿಲ್ಲ. ಹೀಗಾಗಿ ಅದರ ಲಾರಿಗಳು ಎಂದಿನಂತೆ ಓಡಾಡಿವೆ.

ಪ್ರತಿಭಟನೆ ವೇಳೆ ಧಾರವಾಡ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗಿರೀಶ ಮಲನಾಡ್ ಮಾತನಾಡಿ, ಪ್ರಮುಖವಾಗಿ ನಮ್ಮ 5 ಬೇಡಿಕೆಗಳಿದ್ದು, ಅವುಗ‍ಳನ್ನು ಈಡೇರಿಸಿದರೆ ಮುಷ್ಕರ ಹಿಂಪಡೆಯುತ್ತೇವೆ. ಕಳೆದ ಹಲವು ವರ್ಷಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ, ಹೋರಾಟಗಳ ಮೂಲಕ ಆಗ್ರಹಿಸುತ್ತ ಬಂದರೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಸಾರ್ವಜನಿಕರು ಹೋರಾಟಕ್ಕೆ ಬೆಂಬಲ‌ ಸೂಚಿಸಬೇಕು ಎಂದು ಕೋರಿದರು.

ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಎಸ್.ಬಿ‌. ಘಂಟಿಮಠ ಮಾತನಾಡಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಟೋಲ್​ಗಳನ್ನು ಮಾಡಿದ್ದಾರೆ. ಹೀಗೆ ಟೋಲ್ ಹಣ ಸಂಗ್ರಹಿಸುತ್ತಿರುವುದು ನಮಗೆ ಹೊರೆಯಾಗಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಲಾರಿಗಳು ಇಲ್ಲಿ ಅಂಚಟಗೇರಿ, ಹಾಗೂ ಗಬ್ಬೂರು ಬೈಪಾಸ್‌ ಬಳಿ ನಿಂತಿದ್ದವು. ಇದರಿಂದಾಗಿ ಸಕಾಲಕ್ಕೆ ಬೇರೆ ಬೇರೆ ಊರುಗಳಿಗೆ ಅಗತ್ಯ ವಸ್ತುಗಳು ಹೋಗಿಲ್ಲ.

ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಮಟ್ಟದಲ್ಲಿ ಲಾರಿ ಮಾಲೀಕರು ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಮುಷ್ಕರ ನಿಲ್ಲುವುದಿಲ್ಲ. ಸರ್ಕಾರ ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಕ್ತುಮ್ ಮದ್ರಾಸ್, ಮೋದಿನ್ ಪಾಲ್ನಾ, ವಾಸೀಂ ಅಕ್ರಮ್ ಪಾನ್ವಾವಾಲೆ, ನವೀದ್ ಮುಲ್ಲಾ ಸೇರಿದಂತೆ ಹಲವರಿದ್ದರು. ಮುಷ್ಕರದಿಂದ ದೂರ: ಇನ್ನೊಂದೆಡೆ ಮುಷ್ಕರದಿಂದ ದೂರ ಉ‍ಳಿದಿರುವ ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘ, ಮುಷ್ಕರವನ್ನು ದೇಶಾದ್ಯಂತ ಮಾಡಿದರೆ ಬೆಂಬಲ ನೀಡುವುದಾಗಿ ಹೇಳಿದೆ. ಹೀಗಾಗಿ, ಉತ್ತರ ಕರ್ನಾಟಕ ಲಾರಿ ಮಾಲೀಕರ ಸಂಘದಡಿ ಇರುವ ಲಾರಿಗಳು ಎಂದಿನಂತೆ ಸರಕು ಸಾಗಣೆ ನಡೆಸುತ್ತಿವೆ. ಕೇವಲ ರಾಜ್ಯದಲ್ಲಿ ಮುಷ್ಕರ ಮಾಡಿದರೆ ಅದರಿಂದ ಲಾಭವಿಲ್ಲ. ದೇಶಾದ್ಯಂತ ಮುಷ್ಕರ ನಡೆಸಿದರೆ ಬೆಂಬಲಿಸುವುದಾಗಿ ಅದು ಹೇಳಿದೆ. ನಮ್ಮ ಸಂಘ ಈ ಪ್ರತಿಭಟನೆಗೆ ಬೆಂಬಲಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ಗೈನುಸಾಬ ಹೊನ್ಯಾಳ ತಿಳಿಸಿದ್ದಾರೆ.

Share this article