ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಶ್ರೀನಿವಾಸಪುರದ ಹೇಮಾವತಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಂದ ಖರೀದಿಸಿದ ಕಬ್ಬು ಸಾಗಣೆ ಮಾಡಲು ಹೊರ ಜಿಲ್ಲೆಯ ಲಾರಿಗಳು ಹಾಗೂ ಟ್ರ್ಯಾಕ್ಟರ್‌ಗಳನ್ನು ಕರೆತಂದಿರುವುದನ್ನು ಖಂಡಿಸಿ ತಾಲೂಕು ಲಾರಿ ಮಾಲೀಕರ ಸಂಘದಿಂದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಂಭಾಗ ಅಹೋರಾತ್ರಿ ಧರಣಿಯನ್ನು ನಡೆಸಲಾಯಿತು.ದಕ್ಷಿಣ ವಲಯದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ಹೊರ ಜಿಲ್ಲೆಗಳಿಂದ ಸುಮಾರು ೫೦ ಲಾರಿಗಳು ಮತ್ತು ನೂರಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಕರೆತಂದು ಸಕ್ಕರೆ ಕಾರ್ಖಾನೆಯ ಮಾಲೀಕರು ಕಬ್ಬುಗಳನ್ನು ಸಾಗಣೆ ಮಾಡುತ್ತಿದ್ದಾರೆ. ಈ ಸಾಗಾಣಿಕೆಯಿಂದ ಸ್ಥಳೀಯ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಕಾರ್ಖಾನೆ ಸ್ಥಾಪಿಸಿಕೊಂಡ ದಿನದಿಂದಲೂ ಸ್ಥಳೀಯ ಲಾರಿ ಮಾಲೀಕರು ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಾಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹೊರ ಜಿಲ್ಲೆಗಳಿಂದ ಲಾರಿ ಮತ್ತು ಟ್ರ್ಯಾಕ್ಟರ್ ಗಳನ್ನು ಕರೆತಂದು ಕಬ್ಬನ್ನು ಸಾಗಾಟ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಮೊದಲು ಸ್ಥಳೀಯ ಲಾರಿ ಮಾಲೀಕರಿಗೆ ಅವಕಾಶ ನೀಡಿ ನಂತರ ಬೇರೆಯವರಿಗೂ ಅವಕಾಶ ಕಲ್ಪಿಸಿಕೊಡಿ. ಹಾಗೇನಾದರೂ ಅವಕಾಶವನ್ನು ನೀಡದೆ ಹೋದಲ್ಲಿ ಬೃಹತ್ ಮಟ್ಟದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಬರಾಳು ಉಮೇಶ್ ಮಾತನಾಡಿ, ಸ್ಥಳೀಯ ೧೫೦ ಲಾರಿಗಳು ಹಾಗೂ ೫೦ ಟ್ರ್ಯಾಕ್ಟರ್ ಗಳಿದ್ದು ಇವುಗಳಿಗೆ ಮೊದಲ ಆದ್ಯತೆ ನೀಡದೆ ಹೊರ ಜಿಲ್ಲೆಗಳಿಂದ ಕಬ್ಬನ್ನು ಕಟಾವು ಮಾಡಲು ಬಂದಿರುವ ಕೂಲಿ ಕಾರ್ಮಿಕರನ್ನು ಕರೆತಂದು ಅವರಿಂದ ಲಾರಿ ಮತ್ತು ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಜೊತೆಗೆ ಒಂದು ಟ್ರ್ಯಾಕ್ಟರ್ ಗೆ ಎರಡು ಟ್ರೈಲರ್ ಜೋಡಣೆ ಮಾಡಿಕೊಂಡು ಇದರಿಂದ ಕಬ್ಬನ್ನು ಸಾಗಾಟನೆ ಮಾಡುತ್ತಿದ್ದಾರೆ. ಈ ಸಾಗಾಟನೆದಿಂದ ತೂಕದ ಯಂತ್ರದಲ್ಲಿ ಬಹಳಷ್ಟು ಮೋಸ ನಡೆಯುತ್ತಿದೆ. ಇದರಿಂದ ಕಾರ್ಖಾನೆಯ ಮಾಲೀಕರಿಗೆ ಬಹಳಷ್ಟು ಲಾಭದಾಯಕವಾಗಿದೆ.ಈ ಟ್ರ್ಯಾಕ್ಟರ್ ಗಳು ಕೃಷಿ ಚಟುವಟಿಕೆಗಾಗಿ ಎಂದು ಪರವಾನಗಿಯನ್ನು ಪಡೆದುಕೊಂಡು ಇಂದು ವಾಣಿಜ್ಯ ಕೆಲಸ ಕಾರ್ಯಕ್ಕೆ ಬಳಸಿಕೊಂಡಿರುವುದು ಒಂದು ರೀತಿಯ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೂ ಕೂಡ ಈಗಾಗಲೇ ದೂರನ್ನು ನೀಡಲಾಗಿದೆ. ಅವರು ಕೂಡ ಇದರ ಬಗ್ಗೆ ಗಮನಹರಿಸಿಲ್ಲ. ಕೂಡಲೇ ಕಾರ್ಖಾನೆಯವರು ತಾಲೂಕು ಲಾರಿ ಮಾಲೀಕರಿಗೆ ಕಬ್ಬನ್ನು ಸಾಗಾಣಿಕೆ ಮಾಡಲು ಅನುಮತಿಯನ್ನು ನೀಡಬೇಕು ಎಂದರು.
ತಾಲೂಕು ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ನಾರಾಯಣ್, ಅಧ್ಯಕ್ಷ ಗೋವಿಂದ್, ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಸತೀಶ್, ಖಜಾಂಚಿ ಅವಿನಾಶ್, ನಿರ್ದೇಶಕ ರವಿ, ಬಾಲಕೃಷ್ಣ, ಹರೀಶ್, ಗೋಪಿ, ವಾಜಿದ್ ಪಾಷ, ಅಣ್ಣಯ್ಯ, ಬಸವ, ಹರೀಶ್ ಮುಂತಾದವರು ಹಾಜರಿದ್ದರು.