- ವಿಶ್ವ ಹಾಲು ದಿಣಾಚರಣೆ ಪ್ರಯುಕ್ತ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ಭರಣಿ ವೆಂಕಟೇಶ್
ಭಾರತದ ಹೈನೋದ್ಯಮದ ಪಿತಾಮಹ ಡಾ.ಕುರಿಯನ್ ಅವರು ಹೈನುಗಾರಿಕೆಯನ್ನು ಸಹಕಾರ ರಂಗದೊಂದಿಗೆ ಜನತೆಗೆ ಪರಿಚಯಿಸಿದ ಪರಿಣಾಮವೇ ಇಂದು ಸಾಕಷ್ಟು ಜನರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಚಿಮುಲ್, ಕೆಎಂಎಫ್ ನಿರ್ದೇಶಕ ಭರಣಿ ವೆಂಕಟೇಶ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ವಿಶ್ವ ಹಾಲು ದಿಣಾಚರಣೆ ಪ್ರಯುಕ್ತ ರೋಗಿಗಳಿಗೆ ಹಾಲು ಮತ್ತು ಬ್ರೆಡ್ ವಿತರಣೆ ಮಾಡಿ ಮಾತನಾಡಿ, ಮಾಜಿ ಸಚಿವ ಕೋಲಾರ ಮೂಲದ ಎಂ.ವಿ.ಕೃಷ್ಣಪ್ಪನವರನ್ನು ಕರ್ನಾಟಕದ ಹೈನುಗಾರಿಕೆಯ ಜೀವದಾತ ಎಂದರೆ ತಪ್ಪಾಗಲಾರದು. ಬಯಲು ಸೀಮೆಯ ಬರಡು ಪ್ರದೇಶದಲ್ಲಿ ರೈತರು ಕೇವಲ ದೇಸಿ ಹಸುಗಳಿಂದ ಸಿಗುವ ಅಲ್ಪ ಹಾಲಿನಿಂದ ಹೈನುಗಾರಿಕೆ ನಡೆಸುತ್ತಿದ್ದರು. ಅದರಿಂದ ನಯಾ ಪೈಸೆ ಲಾಭವೂ ಬರುತ್ತಿರಲಿಲ್ಲ. ಆಗ ಎಂ.ವಿ. ಕೃಷ್ಣಪ್ಪನವರು ಡೆನ್ಮಾರ್ಕ್‌ನಿಂದ ಹೆಚ್ಚು ಹಾಲು ಕೊಡುವ ವಿದೇಶಿ ಎಚ್.ಎಫ್. ತಳಿಯ ಸೀಮೆ ಹಸುಗಳನ್ನು ತರಿಸಿ ರೈತರಿಗೆ ನೀಡಿದ ಪರಿಣಾಮ ರಾಜ್ಯದಲ್ಲಿ ಕ್ಷೀರ ಕ್ರಾಂತಿ ಉಂಟಾಯಿತು.ವಿಶ್ವ ಆಹಾರ ಸಂಸ್ಥೆ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ೨೦೦೧ರಲ್ಲಿ ಜೂನ್ ೧ನೇ ತಾರೀಖನ್ನು ವಿಶ್ವಹಾಲು ದಿನವನ್ನಾಗಿ ಘೋಷಿಸಿ ಆಚರಿಸುತ್ತಿದೆ. ಆದರೆ ಕಾಕಾತಾಳಿಯವೆಂಬತೆ ಇಂದೇ ಎಂ.ವಿ.ಕೃಷ್ಣಪ್ಪನವರ ಜನ್ಮದಿನವೂ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಮುಲ್ ವಿಸ್ತರಣಾಧಿಕಾರಿಗಳಾದ ಶ್ರೀನಿವಾಸ್, ಹರ್ಷ, ನಿಖಿಲ್, ಪಾಪಣ್ಣ, ಜಿಲ್ಲಾಸ್ಪತ್ರೆಯ ವೈದ್ಯರು, ನರ್ಸಿಂಗ್ ಮುಖ್ಯಸ್ಥೆ ವಿಜಯಲಕ್ಷ್ಮಿ, ಶಿಬಿರ ಕಚೇರಿ ಸಿಬ್ಬಂದಿ ಇದ್ದರು.