ಚಿಕ್ಕಮಗಳೂರು: ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ಗಲಾಟೆ ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಕಾನೂನು ಸುವ್ಯವಸ್ಥೆಯಲ್ಲಿ ವೈಫಲ್ಯವಾಗಿರುವ ಅನುಮಾನವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಯುವವರೆಗೂ ಏನೂ ಹೇಳುವುದಿಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.
ಮದ್ದೂರೂ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್‌ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಹಿಂದೂಗಳನ್ನು ಅರೆಸ್ಟ್ ಮಾಡಿಲ್ಲ. ಯಾರ ಮೇಲೂ ಎಫ್‌ಐಆರ್ ದಾಖಲಿಸಿಲ್ಲ. ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಕಡೆಯಿಂದಲೇ ಗಲಾಟೆ ಆಗಿದೆ. ಗಲಭೆಗೆ ಕಾರಣರಾದವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮದ್ದೂರಿನ ಶಾಂತಿ ಸಭೆಗೆ ಬಿಜೆಪಿಯವರು ಗೈರಾದರೆ ಏನಂತೆ ಜನ ಹಾಜರಿದ್ದರು. ಎರಡೂ ಕೋಮುವಿನ ಜನ ಸಮಾಧಾನದಿಂದ ಇದ್ದರೆ ಅದೇ ಸಮಾಧಾನ. ಬಿಜೆಪಿ, ಜೆಡಿಎಸ್‌ನವರಿಗೆ ಶಾಂತಿ ಬೇಕಿಲ್ಲ. ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ ಎಂದು ಆರೋಪಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡ ಮೇಲೂ ಸಭೆ ಮಾಡುತ್ತಿರುವುದು ರಾಜಕೀಯ ಕಾರಣಕ್ಕೆ. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿಯಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಸ್ತಾಪಿಸಿ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಅವರ ಕಾಲದಲ್ಲಿ ಈ ರೀತಿ ಘಟನೆ ಎಷ್ಟು ಆಗಿಲ್ಲ ಎಂದು ಕಿಡಿಕಾರಿದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಪ್ರಕರಣದ ಬಗ್ಗೆ ಮಾತನಾಡಿ, ಸತ್ಯ ಗೊತ್ತಾಗಬೇಕು. ಧಾರ್ಮಿಕ ಸ್ಥಳಕ್ಕೆ ಕಳಂಕ ಇರಬಾರದು ಎನ್ನುವ ಉದ್ದೇಶದಿಂದ ಎಸ್‌ಐಟಿ ತನಿಖೆ ನಡೆಯುತ್ತಿದೆ. ತನಿಖೆ ಕುರಿತ ಹೆಚ್ಚು ಮಾಹಿತಿ ಗೃಹ ಸಚಿವರು ನೀಡುತ್ತಾರೆ. ನಾವೂ ಮಂಜುನಾಥ ಸ್ವಾಮಿ ಹಾಗೂ ಶಿವನ ಭಕ್ತರೇ. ಪ್ರತಿ ಪಕ್ಷಗಳಿಗೆ ಮಂಜುನಾಥ ಸ್ವಾಮಿಯನ್ನು ಗುತ್ತಿಗೆ ನೀಡಿಲ್ಲ. ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಇಲ್ಲದ ಕಾರಣಕ್ಕೆ ಇಂತಹ ವಿಷಯಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.