ಕೂಡಲೇ ಕಾರ್ಖಾನೆಗಳು ತಡೆಯಾಜ್ಞೆ ವಾಪಸ್ ಪಡೆದು ರೈತರಿಗೆ ₹50 ಪ್ರೋತ್ಸಾಹಧನ ಪಾವತಿಸಬೇಕು. ನಂತರ ಕಾರ್ಖಾನೆಗಳಲ್ಲಿ ಕಬ್ಬು ಅರೆಯಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಜೂ.15 ರಂದು ಎರಡು ಕಾರ್ಖಾನೆಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ರೈತರು, ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮದ್ದೂರು ತಾಲೂಕಿನ ಕೊಪ್ಪದ ಎನ್ ಎಸ್ ಎಲ್ ಮತ್ತು ಚಾಂಷುಗರ್ಸ್ ಕಾರ್ಖಾನೆಗಳ ರೈತ ವಿರೋಧಿ ನೀತಿ ಖಂಡಿಸಿ ಜೂ.15ರಂದು ತಾಲೂಕು ರೈತ ಸಂಘ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಕಾರ್ಯಕರ್ತರು ಸಭೆ ನಡೆಸಿ ಚರ್ಚಿಸಿದರು. ಟನ್ ಕಬ್ಬಿನ ಬಾಕಿ ₹50 ನೀಡದೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ತೀವ್ರವಾಗಿ ಖಂಡಿಸಿದರು.
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಸರ್ಕಾರ ಘೋಷಿಸಿರುವ ಕಾರ್ಖಾನೆಯ ಪಾಲು ಟನ್ ವೊಂದಕ್ಕೆ ₹50 ರಾಜ್ಯದ ಕೆಲವು ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿಸಿವೆ. ಆದರೆ, ಕೊಪ್ಪದ ಎನ್ ಎಸ್ ಎಲ್ ಹಾಗೂ ಕೆ.ಎಂ.ದೊಡ್ಡಿ ಚಾಂಷುಗರ್ಸ್ ಕಾರ್ಖಾನೆಗಳು ₹50 ಪಾವತಿ ಮಾಡದೇ ಇದರ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದನ್ನು ಖಂಡಿಸಿದರು.
ಕೂಡಲೇ ಕಾರ್ಖಾನೆಗಳು ತಡೆಯಾಜ್ಞೆ ವಾಪಸ್ ಪಡೆದು ರೈತರಿಗೆ ₹50 ಪ್ರೋತ್ಸಾಹಧನ ಪಾವತಿಸಬೇಕು. ನಂತರ ಕಾರ್ಖಾನೆಗಳಲ್ಲಿ ಕಬ್ಬು ಅರೆಯಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಜೂ.15 ರಂದು ಎರಡು ಕಾರ್ಖಾನೆಗಳ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ರೈತರು, ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರದಲ್ಲಿ ರೈತರ ವಿರುದ್ಧ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಕೃಷಿ ಭೂಮಿಯನ್ನು ಪಡೆದುಕೊಂಡು ಜತೆಗೆ ರೈತರನ್ನು ಒಕ್ಕಲೆಬ್ಬಿಸಿ ರೈತರಿಗೆ ಅನ್ಯಾಯವೆಸಗಲು ಹೊರಟಿದೆ. ರೈತಪರ ಹೋರಾಟಗಳನ್ನು ಲೆಕ್ಕಿಸದೆ ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ರೈತಪರವಾಗಿ ಟೌನ್ ಶಿಪ್ ಯೋಜನೆಯನ್ನು ಕೈಬಿಟ್ಟು ರೈತರಿಗೆ ಅನುಕೂಲವಾಗುವ ಕೃಷಿ ಕಾಯ್ದೆಯನ್ನು ಜಾರಿಗೆಗೊಳಿಸಿ ರೈತರ ಹಿತ ಕಾಪಾಡಬೇಕು. ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪಾಜಿ, ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್, ವೃತ್ತ ಘಟಕದ ಅಧ್ಯಕ್ಷ ಸಿದ್ದರಾಜು ಕಳ್ಳಿಮೆಳೆದೊಡ್ಡಿ, ತಾಲೂಕು ಉಪಾಧ್ಯಕ್ಷ ಮುಟ್ಟನಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಸಿ.ಎ.ಕೆರೆ ಮಹದೇವು, ಡಿ.ಎ.ಕೆರೆ ರಮೇಶ್, ಮಾದರಹಳ್ಳಿ ದೇಶಿಗೌಡ, ಗುರುದೇವರಹಳ್ಳಿ ಬೋರೇಗೌಡ, ಕೃಷ್ಣ ಅಣ್ಣೂರು, ಬನ್ನಹಳ್ಳಿ ರಮೇಶ, ನಾಗಲಿಂಗು ಮಾದರಹಳ್ಳಿ ಸೇರಿ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.