ಉಸಿರಾಟದ ಸಮಸ್ಯೆಯಿಂದ ವೀರಗಾಸೆ ಕಲಾವಿದ ಮಹದೇವಪ್ಪ ನಿಧನ

KannadaprabhaNewsNetwork |  
Published : Jun 12, 2026, 01:45 AM IST
11ಕೆಎಂಎನ್ ಡಿ19,20 | Kannada Prabha

ಸಾರಾಂಶ

ಇವರ ತಂದೆಯೂ ಸಹ ಪಾರಂಪರಿಕವಾಗಿ ವೀರಗಾಸೆ ಕಲೆ ರೂಢಿಸಿಕೊಂಡಿದ್ದರು. ಕಳೆದ ಐದು ದಶಕಗಳಿಂದ ನಿರಂತರವಾಗಿ ವೀರಗಾಸೆ ವೇಷ ಧರಿಸಿ ಶ್ರೀ ವೀರಭದ್ರಸ್ವಾಮಿ ಸೇವೆ ಮಾಡುತ್ತಿದ್ದ ಮಹದೇವಪ್ಪ ತಮ್ಮ ಪುತ್ರ ಮತ್ತು ಸಹೋದರರಿಗೂ ವೀರಗಾಸೆ ಕಲೆಯನ್ನು ಕಲಿಸಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ರಾಜ್ಯೋತ್ಸವ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಪಟ್ಟಣದ ಖ್ಯಾತ ವೀರಗಾಸೆ ಕಲಾವಿದ ಮಹದೇವಪ್ಪ(64) ಉಸಿರಾಟದ ಸಮಸ್ಯೆಯಿಂದ ಬುಧವಾರ ತಡರಾತ್ರಿ ನಿಧನರಾದರು.

ಪಟ್ಟಣದ ಕುಂಬಾರಬೀದಿ ನಿವಾಸಿ ಮಹದೇವಪ್ಪ ಅವರು ಕೆಲ ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪಟ್ಟಣದ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬುಧವಾರ ತಡರಾತ್ರಿ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಉಂಟಾಗಿ ಮಗಳ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ರಾಜ್ಯ ಸರ್ಕಾರದ ಕನ್ನಡ ರಾಜ್ಯೋತ್ಸವ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸೇರಿ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಮಹದೇವಪ್ಪ ಅವರು ವೀರಗಾಸೆ ಕಲೆಯನ್ನೇ ಉಸಿರಾಗಿಸಿಕೊಂಡು ತಾಲೂಕು, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ತಮ್ಮ ಕಲಾ ಪ್ರದರ್ಶನದ ಮೂಲಕ ಜನಮೆಚ್ಚುಗೆ ಗಳಿಸಿದ್ದರು. ಅಲ್ಲದೆ ಕೆಲ ಚಲನಚಿತ್ರಗಳಲ್ಲಿಯೂ ವೀರಗಾಸೆ ಕಲಾವಿದರಾಗಿ ಅಭಿನಯಿಸಿದ್ದರು.

ಕಳೆದ ನಾಲ್ಕೈದು ವರ್ಷಗಳಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ನವದೆಹಲಿಯ ನಿವಾಸದಲ್ಲಿ ಡಿಸೆಂಬರ್ ತಿಂಗಳಲ್ಲಿ ಜರುಗುತ್ತಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀರಗಾಸೆ ಪ್ರದರ್ಶನ ನೀಡುತ್ತಿದ್ದ ಮಹದೇವಪ್ಪ ಅವರನ್ನು ಸೋನಿಯಾಗಾಂಧಿ ಸನ್ಮಾನಿಸಿದ್ದರು.

ಇವರ ತಂದೆಯೂ ಸಹ ಪಾರಂಪರಿಕವಾಗಿ ವೀರಗಾಸೆ ಕಲೆ ರೂಢಿಸಿಕೊಂಡಿದ್ದರು. ಕಳೆದ ಐದು ದಶಕಗಳಿಂದ ನಿರಂತರವಾಗಿ ವೀರಗಾಸೆ ವೇಷ ಧರಿಸಿ ಶ್ರೀ ವೀರಭದ್ರಸ್ವಾಮಿ ಸೇವೆ ಮಾಡುತ್ತಿದ್ದ ಮಹದೇವಪ್ಪ ತಮ್ಮ ಪುತ್ರ ಮತ್ತು ಸಹೋದರರಿಗೂ ವೀರಗಾಸೆ ಕಲೆಯನ್ನು ಕಲಿಸಿದ್ದರು.

ಪತ್ನಿ ಸುಮಿತ್ರ, ಪುತ್ರ ಅನಿರುದ್ರ ಮತ್ತು ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮಹದೇವಪ್ಪ ಅವರ ಪಾರ್ಥೀವ ಶರೀರವನ್ನು ಗುರುವಾರ ಮಧ್ಯಾಹ್ನದವರೆಗೂ ಪಟ್ಟಣದ ಕುಂಬಾರಬೀದಿಯ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ಪಟ್ಟಣದ ಮೈಸೂರು ರಸ್ತೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಗಣ್ಯರ ಸಂತಾಪ :

ವೀರಗಾಸೆ ಕಲಾವಿದ ಮಹದೇವಪ್ಪ ಅವರ ನಿಧನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಅಣೆಚನ್ನಾಪುರ ಮಂಜೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ವೀರಗಾಸೆ ಕಲೆಯಲ್ಲಿ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದ ಪಟ್ಟಣದ ಮಹದೇವಪ್ಪ ಅವರು ಕಲೆಯನ್ನೇ ಉಸಿರಾಗಿಸಿಕೊಂಡು ಬಹಳ ಎತ್ತರಕ್ಕೆ ಬೆಳೆದಿದ್ದರು. ಇವರ ಅಗಲಿಕೆಯಿಂದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲೆಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹದಿಹರೆಯದಲ್ಲಿ ಮಕ್ಕಳು ಜಾಗ್ರತೆ ವಹಿಸಬೇಕು: ವೈ.ಎಂ.ಲಲಿತ ಸಲಹೆ
ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಲು ಸಾಧ್ಯ: ದರ್ಶನ್