
ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ
ಸುಧೀರ್ಘ ಇತಿಹಾಸವಿಲ್ಲದ ಮಾದಿಗ ಸಮಾಜ ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಸೋಮವಾರ ತಾಲೂಕಿನ ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು. ಬಹಳಷ್ಟು ವರ್ಷಗಳ ಹಿಂದೆ ಮಾದಿಗ ಸಮಾಜವನ್ನು ಬಡತನ ಭಯಂಕರವಾಗಿ ಕಾಡುತ್ತಿತ್ತು. ಅದೆಷ್ಟೋ ಕುಟುಂಬಗಳು ತಿನ್ನಲು ಅನ್ನವಿಲ್ಲದೆ ಹಸಿವಿನಿಂದ ಸತ್ತ ಉದಾಹರಣೆಗಳಿವೆ. ಆದರೆ ಈಗ ಸಮಾಜದ ಪರಿಸ್ಥಿತಿ ಬದಲಾಗಿದೆ. ಊಟ,ಬಟ್ಟೆಗೆ ಬರವಿಲ್ಲ. ಹಾಗಾಗಿ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಅಂಬೇಡ್ಕರ್ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಕುಡಿತ ಮತ್ತಿತರೆ ದುಶ್ಚಟಗಳಿಂದ ಸಮಾಜ ಮುಕ್ತವಾಗಬೇಕು. ಶಿಕ್ಷಣ ಪಡೆಯಿರಿ ಮತ್ತು ಸಂಘಟಿತರಾಗಿ ಎಂದು ಎಲ್ಲಾ ಸಮುದಾಯಗಳಿಗೂ ಅಂಬೇಡ್ಕರ್ ಕರೆ ಕೊಟ್ಟರು. ಇದನ್ನು ಇತರೆ ಸಮಾಜದವರು ಕೇವಲ ಮಾದಿಗ ಸಮಾಜಕ್ಕೆ ಅಂಬೇಡ್ಕರ್ ಕರೆ ಕೊಟ್ಟಿದ್ದಾರೆ ಎಂದು ತಪ್ಪಾಗಿ ಅರ್ಥೈಸಿ ಕೊಂಡರು. ಆದರೆ ಇದೀಗ ಎಲ್ಲಾ ಸಮುದಾಯಗಳಿಗೂ ಅಂಬೇಡ್ಕರ್ ಅರ್ಥವಾಗಿದ್ದಾರೆ ಎಂದರು.ನ್ಯಾಯಯುತವಾಗಿ ಮೀಸಲಾತಿ ದೊರೆಯದ ಸಮುದಾಯಕ್ಕೆ ಒಳ ಮೀಸಲಾತಿ ನೀಡಬಹುದು ಎಂದು ಸುಪ್ರೀಂಕೋರ್ಟ ಹೇಳಿತ್ತು. ಇದನ್ನೇ ಮಾನದಂಡವಾಗಿಟ್ಟುಕೊಂಡ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದೆ. 15 ಕ್ಕಿಂತ ಕಡಿಮೆ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭ ಒಳ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ನಿಯಮವಿದೆ. ಈ ನ್ಯೂನ್ಯತೆ ಸರಿಪಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ದಲಿತ ಮುಖಂಡರಾದ ಪ್ರಮೋದ್, ಶೂದ್ರ ಶ್ರೀನಿವಾಸ್,ಶೋಭ,ಭೋಗಪ್ಪ, ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ.ರಂಗಪ್ಪ,ನರಸಿಂಹಪ್ಪ, ಶೂದ್ರ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆ ಹೆಸರಲ್ಲಿ ದಲಿತ ಸಮುದಾಯ ಇತರೆ ಸಮುದಾಯಗಳ ಜತೆ ಸಂಘರ್ಷಕ್ಕೆ ಇಳಿಯಬಾರದು.ಇತರೆ ಸಮುದಾಯಗಳ ಜತೆ ಸಹಬಾಳ್ವೆ ನಡೆಸಬೇಕು. ಕೇವಲ ನಮ್ಮ ಒಂದು ಸಮಾಜದದಿಂದ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಭಿವೃದ್ಧಿ ಹೊಂದಲು ಇತರೆ ಸಮುದಾಯಗಳ ಸಹಕಾರ ಅಗತ್ಯ
-- ಕೋಟ್ --
- ಕೆ.ಎಸ್.ಆನಂದ್,ಶಾಸಕ,ಕಡೂರು
2023 ರ ವಿದಾನಸಭೆ ಚುನಾವಣೆಯಲ್ಲಿ ನನ್ನ ಸ್ವಾಭಿಮಾನವೇ ನನ್ನ ಸೋಲಿಗೆ ಕಾರಣವಾಯಿತು. ಕೆಲವರನ್ನು ಭೇಟಿ ಮಾಡುವಂತೆ ಸಲಹೆ ಬಂದಿತ್ತು. ಸ್ವಾಭಿಮಾನಿಯಾದ ನಾನು ಅವರನ್ನು ಭೇಟಿ ಮಾಡಲು ನಿರಾಕರಿಸಿದೆ. ಅವರನ್ನು ಭೇಟಿ ಮಾಡಬೇಕಿತ್ತು ಎಂದು ಈಗ ಅನ್ನಿಸುತ್ತಿದೆ. ಅದರ ಜತೆಗೆ ಚುನಾವಣೆ ಪ್ರಚಾರಕ್ಕೆ ಹೋದಾಗ ಹಳ್ಳಿಗಳಲ್ಲಿ ಸಿಡಿಸುತ್ತಿದ್ದ ಪಟಾಕಿಗಳು, ಮುಂದಿನ ಉಪ ಮುಖ್ಯಮಂತ್ರಿ ಆಂಜನೇಯ ಎಂದು ಜನರು ಕೂಗುತ್ತಿದ್ದದ್ದನ್ನು ನೋಡಿ ನಾನು ಗೆದ್ದು ಬಿಟ್ಟಿದ್ದೇನೆ ಎಂಬ ಭ್ರಮೆ ಮೂಡಿತ್ತು. ಆದರೆ ಚುನಾವಣೆ ಫಲಿತಾಂಶ ಬಂದಾಗ ನಾನು ಸೋತಿದ್ದೆ. ಆದರೆ ಹೋರಾಟಗಾರನಾದ ನನಗೆ ಸೋಲು ಗೆಲುವು ಎರಡೂ ಒಂದೇ ಎಂದು ಎಚ್.ಆಂಜನೇಯ ಹೇಳಿದರು.
25 ಬೀರೂರು 1
ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಬೇಡ್ಕರ್ ಪ್ರತಿಮೆಯನ್ನು ಮಾಜಿ ಸಚಿವ ಎಚ್.ಆಂಜನೇಯ ಅನಾವರಣಗೊಳಿಸಿದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ,ಶಾಸಕ ಕೆ.ಎಸ್.ಆನಂದ್ ಮತ್ತಿತರರು ಇದ್ದರು.