ಕನ್ನಡಪ್ರಭ ವಾರ್ತೆ ಮಡಿಕೇರಿ
ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಸೋಮವಾರ ಸಂಜೆ ನಗರದ ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸಲಾಯಿತು. ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ದೇವತೆಗಳ ಮುಖವಾಡಗಳನ್ನು ಧರಿಸಿ ಹೂವುಗಳಿಂದ ಅದ್ಭುತವಾಗಿ ಅಲಂಕಾರ ಮಾಡಿದ್ದು, ಗಮನ ಸೆಳೆಯಿತು.
ಶಕ್ತಿದೇವತೆಗಳಾದ ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿ, ಶ್ರೀ ದಂಡಿನ ಮರಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳ ಕರಗ ಬಿಂಬಗಳು ಪುಷ್ಪಾಲಂಕೃತವಾಗಿ ಭಕ್ತರ ಜಯಘೋಷದೊಂದಿಗೆ ಮೆರೆವಣಿಗೆ ಆರಂಭಿಸಿದವು. ಪೂಜೆ ಸಲ್ಲಿಕೆ ಬಳಿಕ ನಾಲ್ಕು ದೇವತೆಗಳ ಕರಗಗಳು ಮೆರವಣಿಗೆ ಹೊರಟವು.ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪೂಜೆಯ ನಂತರ ಆರಂಭವಾಗಿರುವ ಕರಗಗಳು ನಗರ ಪ್ರದಕ್ಷಿಣೆ ಇನ್ನು 9 ದಿನಗಳ ಕಾಲ ಮುಂದುವರಿಯಲಿದೆ.
ಕರಗ ಹೊರುವ ಸಂಪ್ರದಾಯ ಮಡಿಕೇರಿಯಲ್ಲಿ ಹಾಲೇರಿ ಅರಸರ ಕಾಲದಲ್ಲಿ ಆರಂಭವಾಯಿತು. ಮಾರಕ ರೋಗವೊಂದು ಸ್ಥಳೀಯರನ್ನು ಕಾಡಿ, ಸಾವು, ನೋವುಗಳಾದಾಗ ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಹೊರಡಿಸುವ ಮೂಲಕ ನವರಾತ್ರಿ ಆಚರಿಸಲಾಗುತ್ತಿದೆ.
ಬಳಿಕ ಮಾತನಾಡಿದ ಸಚಿವರು, ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ. ಭಕ್ತಿಭಾವದಿಂದ ಕರಗ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಸಚಿವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಡಿವೈಎಸ್ಪಿ ಸೂರಜ್, ಪೌರಾಯುಕ್ತರಾದ ಎಚ್.ಆರ್. ರಮೇಶ್, ತಹಸೀಲ್ದಾರಾದ ಶ್ರೀಧರ, ನಗರ ದಸರಾ ಸಮಿತಿ ಅಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ವಿವಿಧ ಉಪ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.