ಕನ್ನಡಪ್ರಭ ವಾರ್ತೆ ಮಡಿಕೇರಿ ನಮ್ಮ ಸಂಸ್ಕೃತಿ ಹಬ್ಬಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ಜೀವನದಲ್ಲಿ ಅದನ್ನು ಪ್ರತಿ ದಿನವೂ ಅಳವಡಿಸಿಕೊಳ್ಳಬೇಕು. ಅಲ್ಲದೆ ಜಾನಪದವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ವೆಂಕಟ ರಾಜಾ ಹೇಳಿದರು. ಮಡಿಕೇರಿ ದಸರಾ ಅಂಗವಾಗಿ ನಗರದ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ನಡೆದ ಜಾನಪದ ದಸರಾ ಕಾರ್ಯಕ್ರಮದಲ್ಲಿ ರಾಗಿಕಲ್ಲನ್ನು ತಿರುಗಿಸುವ ಮೂಲಕ ಜಾನಪದ ದಸರಾಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾನಪದ ಶ್ರೀಮಂತ ಸಂಸ್ಕೃತಿಯೊಂದಿಗೆ ನಾವೆಲ್ಲರು ಮುನ್ನಡೆಯಬೇಕಾಗಿದೆ. ಬದುಕಿನ ಪದ್ಧತಿಯೇ ಆಗಿರುವ ಜಾನಪದದ ಅರಿವನ್ನು ಮುಂದಿನ ಪೀಳಿಗೆಗೆ ನೀಡುವ ಅಗತ್ಯವಿದೆ. ಈ ನೆಲದ ಬದುಕು, ಪರಂಪರೆ, ಹಬ್ಬ ಹರಿದಿನಗಳನ್ನು ಒಳಗೊಂಡ ಜಾನಪದ ಸಂಸ್ಕೃತಿಯ ಉಳಿವು ಅತ್ಯವಶ್ಯವಾಗಿ ನಡೆಯಬೇಕಾಗಿದ್ದು, ಇದಕ್ಕಾಗಿ ಇದರ ಕುರಿತ ತಿಳುವಳಿಕೆಯನ್ನು ಯುವ ಪೀಳಿಗೆಗೆ ನೀಡುವುದು ಅತ್ಯವಶ್ಯ ಎಂದು ಹೇಳಿದರು. ವಿಶಾಲವಾದ ಭಾರತ ದೇಶದಲ್ಲಿ ನೂರಾರು ಭಾಷೆ, ಸಂಸ್ಕೃತಿಗಳಿವೆಯಾದರೂ ಜಾನಪದವೆನ್ನುವುದು ಒಂದೇ ಆಗಿದೆ. ಎಲ್ಲರ ನಡುವಿನ ಪ್ರೀತಿ ವಿಶ್ವಾಸ, ಪರಸ್ಪರ ಸೌಹಾರ್ದತೆಗಳೇ ಜಾನಪದದ ಆಂತರ್ಯದ ಮೂಲಸೆಲೆಯಾಗಿದೆ. ಈ ಹಿನ್ನೆಲೆ ಜಾನಪದ ಕಾರ್ಯಕ್ರಮ ದಸರಾ ಉತ್ಸವಕ್ಕಷ್ಟೆ ಸೀಮಿತವಾಗದಿರಲಿ ಎಂದು ಆಶಿಸಿದರು. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಈ ಬಾರಿ ಏಳನೇ ವರ್ಷದ ಜಾನಪದ ದಸರಾ ಉತ್ಸವವನ್ನು ನಡೆಸಲಾಗುತ್ತಿದೆ. ಇದರ ಮೂಲಕ ಮರೆಯಾಗಿ ಹೋಗುತ್ತಿರುವ ನಮ್ಮ ಜಾನಪದ ಬದುಕು, ಸಂಸ್ಕೃತಿಯನ್ನು ಮುನ್ನೆಲೆಗೆ ತರುವ ಶ್ಲಾಘನೀಯ ಕಾರ್ಯ ನಡೆಯುತ್ತಿದೆ ಎಂದರು. ನಮ್ಮ ಮಕ್ಕಳಿಗೆ ಈ ನೆಲದ ಭಾಷೆ, ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡಲು ಎಂದಿಗೂ ಮರೆಯಬಾರದು. ಜಾನಪದ ಸಂಸ್ಕೃತಿಯ ಕ್ರೀಡೆಗಳನ್ನು ಶಾಲಾ ಮಟ್ಟದಲ್ಲಿ ನಡೆಸಲು ಜಾನಪದ ಪರಿಷತ್ ಮುಂದಾಗುವಂತೆ ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಪರಸ್ಪರ ಪ್ರೀತಿ, ವಿಶ್ವಾಸ, ಮಮಕಾರ, ಸೌಹಾರ್ದತೆಗಳನ್ನು ಹೃದಯದಿಂದ ಹೃದಯಕ್ಕೆ ಹಂಚುವ ಶಕ್ತಿ ಮತ್ತು ಚೈತನ್ಯ ಜಾನಪದಕ್ಕಿದೆ. ಇತರರನ್ನು ವಿಶ್ವಾಸದಿಂದ ಕಂಡು ಪ್ರೀತಿ , ಸೌಹಾರ್ದತೆಗಳನ್ನು ತೋರುವ ಮನಸ್ಥಿತಿ ಅತ್ಯಂತ ಸಹಜವಾಗಿ ಜಾನಪದ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಇಂತಹ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಮುನ್ನಡೆಯಬೇಕೆನ್ನವ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್‌ಗೆ ಕಟ್ಟಡವೊಂದನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ, ಬೇಡಿಕೆ ಈಡೇರಿಸಿದಲ್ಲಿ ಜಾನಪದ ಮ್ಯೂಸಿಯಂ ಮಾಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ನಗರಸಭಾ ಸದಸ್ಯರಾದ ಶಾರದಾ ನಾಗರಾಜು, ಕೆ.ಎಸ್. ರಮೇಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷರುಗಳಾದ ಸುಜಲಾ ದೇವಿ, ಟೋಮಿ ಥೋಮಸ್, ಪ್ರಕಾಶ್, ಚಂದ್ರ‍್ರಮೋಹನ್, ಪ್ರಶಾಂತ್, ದಿಲನ್ ಚಂಗಪ್ಪ ಮತ್ತಿತರರು ಹಾಜರಿದ್ದರು. ಜಾನಪದ ಪರಿಷತ್‌ನ ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರು ಹಾಗೂ ಜಾನಪದ ಪರಿಷತ್ ಪದಾಧಿಕಾರಿ ಅನಿಲ್ ಎಚ್.ಟಿ. ಸ್ವಾಗತಿಸಿದರು. ಜಾನಪದ ಪರಿಷತ್ ಖಜಾಂಚಿ ಸಂಪತ್ ಕುಮಾರ್ ವಂದಿಸಿದರು. ಬಾಕ್ಸ್... ಜಾನಪದ ವಸ್ತು ಪ್ರದರ್ಶನ ಜಾನಪದ ದಸರಾ ಅಂಗವಾಗಿ ಮೂರ್ನಾಡು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳಾದ ಕಿಗ್ಗಾಲು ಹರೀಶ್ ಅವರು ಇದೇ ಸಂದರ್ಭ ಆಯೋಜಿಸಿದ್ದ, ಅತ್ಯಪರೂಪದ ಹಳೆಯ ನಿತ್ಯೋಪಯೋಗಿ ವಸ್ತುಗಳ ಪ್ರದರ್ಶನ ಗಮನ ಸೆಳೆಯಿತು. ಸ್ಪರ್ಧಾ ವಿಜೇತರು ಜಾನಪದ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಬೊಂಬೆ ಜೋಡಣೆ ಸ್ಪರ್ಧೆ ಮತ್ತು ಕಥೆ ಹೇಳುವ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬೊಂಬೆ ಜೋಡಣೆ ಸ್ಪರ್ಧೆಯಲ್ಲಿ ಮಾಲಾ ರೋಶನ್ ಮತ್ತು ಶುಭಾ ವಿಶ್ವನಾಥ್ ಪ್ರಥಮ, ನೀತು ಮತ್ತು ಸವಿತಾ ರಾಕೇಶ್ ದ್ವಿತೀಯ, ಹೇಮಾ ರಘ ತೃತೀಯ ಬಹುಮಾನ ಪಡೆದುಕೊಂಡರು. ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗೀರಥಿ ಹುಲಿತಾಳ ಪ್ರಥಮ, ಪ್ರಮೀಳಾ ರಮೇಶ್ ದ್ವಿತೀಯ ಮತ್ತು ನಗರದ ಸಂತ ಜೋಸೆಫರ ಶಾಲೆಯ ಕುಮಾರಿ ಅನಘ ತೃತೀಯ ಬಹುಮಾನ ಸ್ವೀಕರಿಸಿದರು. ಕಲಾ ಜಾಥಾ ಜಾನಪದ ದಸರಾ ಅಂಗವಾಗಿ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಗಾಂಧಿ ಮೈದಾನದವರೆಗೆ ಕಲಾ ಜಾಥಾ ನಡೆಯಿತು. ಜಾನಪದ ಉಡುಪು ತೊಟ್ಟ ಮಕ್ಕಳು, ಪುಟಾಣಿಗಳ ಚೆಂಡೆ ಮೇಳ, ವೀರಗಾಸೆ, ಪಟ ಕುಣಿತ, ಡೊಳ್ಳು ಕುಣಿತಗಳೊಂದಿಗೆ ಗುರುವಾರ ಬೆಳಗ್ಗೆ ಸರಾ ಉತ್ಸವಕ್ಕೆ ವಿಶೇಷ ಮೆರುಗು ನೀಡಿದರು. ಈ ನೆಲದ ಶ್ರೀಮಂತ ಜಾನಪದ ಸಂಸ್ಕೃತಿಯ ಸೌಗಂಧವನ್ನು ಪಸರಿಸಿತು. ಕಲಾ ಜಾಥಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಚಾಲನೆ ನೀಡಿದರೆ, ಜಾನಪದ ದಸರಾ ಉತ್ಸವದ ಪ್ರಮುಖ ರೂವಾರಿಯಾದ ಕೊಡಗು ಜಿಲ್ಲಾ ಜಾನಪದ ಪರಿಷತ್‌ನ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಪದಾಧಿಕಾರಿಗಳು, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮತ್ತು ಪದಾಧಿಕಾರಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.