ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳರಾಜ್ಯಾದ್ಯಂತ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟದಲ್ಲಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಖುದ್ದು ಉನ್ನತ ಶಿಕ್ಷಣ ಸಚಿವರೇ ಈ ವಿಷಯ ಹೇಳಿದ್ದಾರೆ. ಇದಕ್ಕಿಂತ ಘನಘೋರ ಎಂದರೆ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ (ವಿಎಸ್‌ಕೆವಿವಿ) ಪರೀಕ್ಷಾ ವೆಚ್ಚ ನಿಭಾಯಿಸಲು ಆಗದಂತಾಗಿದೆ ಎಂಬ ಅಂಶ ಬಹಿರಂಗವಾಗಿದೆ.ಕಳೆದ ನಾಲ್ಕು ಸೆಮಿಸ್ಟರ್‌ಗಳ ಪರೀಕ್ಷಾ ವೆಚ್ಚ ಕಳೆದೊಂದು ವರ್ಷದಿಂದ ತನ್ನ ವ್ಯಾಪ್ತಿಯ ಕಾಲೇಜುಗಳಿಗೆ ಇದುವರೆಗೂ ನೀಡಿಲ್ಲ. ಪರೀಕ್ಷಾ ವೆಚ್ಚವನ್ನು ಕಾಲೇಜಿನ ಖಾತೆಯಲ್ಲಿ ಇಲ್ಲವೇ ಖಾಸಗಿಯಾಗಿ ನಿಭಾಯಿಸಿದ ಪ್ರಾಚಾರ್ಯರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.ವಿವಿ ವ್ಯಾಪ್ತಿಯಲ್ಲಿ ಸುಮಾರು 140 ಕಾಲೇಜುಗಳಿದ್ದು, ಈ ಎಲ್ಲ ಕಾಲೇಜುಗಳಲ್ಲಿ ಪರೀಕ್ಷಾ ವೆಚ್ಚಕ್ಕಾಗಿ ಮಾಡುವ ಮತ್ತು ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಕೊಡುವ ಭತ್ಯೆಯನ್ನು ಕಳೆದ ನಾಲ್ಕು ಸೆಮಿಷ್ಟರ್‌ಗಳಿಂದಲೂ ನೀಡಿಲ್ಲ. ನಾಲ್ಕು ಬಾರಿ ಪರೀಕ್ಷೆ ನಡೆಸಿದ ವೆಚ್ಚ ಮತ್ತು ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಭತ್ಯೆ ನೀಡಿಲ್ಲ.ಪ್ರತಿ ಕಾಲೇಜಿಗೂ ₹5-10 ಲಕ್ಷ ಬಾಕಿ ಇದ್ದು, ಇದೇ ರೀತಿ 140 ಕಾಲೇಜುಗಳಲ್ಲಿಯೂ ಬಾಕಿ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ವೆಚ್ಚದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಈ ಕುರಿತು ಕುಲಪತಿಗೆ, ಕುಲಸಚಿವರಿಗೆ ವಿವಿ ವ್ಯಾಪ್ತಿಯ ಕಾಲೇಜಿನ ಪ್ರಾಚಾರ್ಯರು ಮನವಿ ಮಾಡಿಕೊಂಡಿದ್ದಾರೆ. ಚುನಾಯಿತ ಪ್ರತಿನಿಧಿಗಳ ಮೂಲಕವು ಕೊಡುವಂತೆ ಕೋರಿಕೊಂಡಿದ್ದಾರೆ. ಆದರೆ, ಇದುವರೆಗೂ ವಿವಿಗೆ ಕೊಡಲು ಆಗಿಲ್ಲ.ಇದಕ್ಕೆ ವಿವಿಯ ಅಧಿಕಾರಿಗಳು ಹಣ ಇಲ್ಲ ಎಂದು ಹೇಳುವುದಿಲ್ಲ, ಬದಲಾಗಿ ಸಿಬ್ಬಂದಿ ಕೊರತೆ ಮತ್ತು ಇತರ ವಿಭಾಗದಲ್ಲಿ ಅವರನ್ನು ನಿಯೋಜನೆ ಮಾಡಿದ್ದರಿಂದ ಪಾವತಿ ಮಾಡಲು ವಿಳಂಬವಾಗಿರುವುದು ನಿಜ ಎನ್ನುತ್ತಾರೆ. ಆರ್ಥಿಕ ಸಮಸ್ಯೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪರೀಕ್ಷಾ ವೆಚ್ಚ ಪಾವತಿಸುವುದಕ್ಕೂ ಸಿಬ್ಬಂದಿ ಕೊರತೆಗೂ ಸಂಬಂಧ ಹೇಳುವುದು ಕೇವಲ ಸಬೂಬು ಎನ್ನುವುದು ಭತ್ಯೆಗಾಗಿ ಕಾಯುತ್ತಿರುವ ಅತಿಥಿ ಉಪನ್ಯಾಸಕರ ಆರೋಪ. ಇದೆಲ್ಲವೂ ಕೇವಲ ಮುಂದೂಡುವ ತಂತ್ರವಷ್ಟೇ, ನಾಲ್ಕು ಸೆಮಿಸ್ಟರ್‌ಗಳು ಮುಗಿದರೂ ಸಿಬ್ಬಂದಿ ಪರೀಕ್ಷಾ ವೆಚ್ಚ ಪಾವತಿಸಲು ಆಗುತ್ತಿಲ್ಲವೇ ಎಂದು ಪ್ರಶ್ನೆ ಮಾಡುತ್ತಾರೆ.ಎಲ್ಲಿಂದ ನಿಭಾಯಿಸುವುದು?: ಪರೀಕ್ಷಾ ಶುಲ್ಕವನ್ನು ನಿಭಾಯಿಸದೇ ಇರಲು ಆಗುವುದಿಲ್ಲ. ಹೀಗೆ ನಾಲ್ಕು ಸೆಮಿಸ್ಟರ್‌ಗಳ ಕಾಲ ಈ ವೆಚ್ಚವನ್ನು ಎಲ್ಲಿಂದ ನಿಭಾಯಿಸುವುದು ಎನ್ನುವ ಪ್ರಾಚಾರ್ಯರ ಪ್ರಶ್ನೆಗೆ ವಿವಿಯಿಂದ ಯಾವುದೇ ಉತ್ತರ ಇಲ್ಲ.ಈ ಹಿಂದೆ ಪರೀಕ್ಷಾ ವೆಚ್ಚವನ್ನು ಅಡ್ವಾನ್ಸ್ ಪಾವತಿ ಮಾಡುವ ಪದ್ಧತಿ ಇತ್ತು. ಆದರೆ, ಈಗ ಪರೀಕ್ಷೆ ಮುಗಿದ ಮೇಲೆ ವರ್ಷವಾದರೂ ಪಾವತಿಯಾಗದಿದ್ದರೆ ಆರ್ಥಿಕ ಸಮಸ್ಯೆ ಇಲ್ಲ ಎನ್ನುವುದನ್ನು ನಂಬಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ.
ವಿವಿಗೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಸಂಬಂಧಪಟ್ಟ ಸಿಬ್ಬಂದಿ ಬೇರೆಡೆ ನಿಯೋಜಿಸಿದ್ದರಿಂದ ಬಿಲ್ ಪಾವತಿಯಾಗಿಲ್ಲ. ಅಷ್ಟಕ್ಕೂ ಬಾಕಿ ಇರುವುದು ಕೇವಲ ₹27 ಲಕ್ಷ ಮಾತ್ರ. ವಾರದೊಳಗೆ ಪಾವತಿ ಮಾಡಲಾಗುತ್ತದೆ ಎನ್ನುತ್ತಾರೆ ವಿಎಸ್‌ಕೆವಿವಿ ಕುಲಸಚಿವ ರಮೇಶ ಓಲೇಕಾರ.ಪರೀಕ್ಷಾ ವೆಚ್ಚ, ಅತಿಥಿ ಉಪನ್ಯಾಸಕರ ಭತ್ಯೆಯ ಬಿಲ್‌ಗಳನ್ನು ಸಲ್ಲಿಕೆ ಮಾಡಿದ್ದು, ಈ ಕುರಿತು ಪಾವತಿ ಮಾಡುವಂತೆಯೂ ವಿವಿ ಕುಲಪತಿ, ಕುಲಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಶೀಘ್ರ ಪಾವತಿಯಾಗುತ್ತದೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ತಿಮ್ಮಾರಡ್ಡಿ.