ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ನಾಡಹಬ್ಬ ದಸರಾ ಸಂಬಂಧ ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ವಾಹನ ಸಂಚಾರ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.ಅ.2ರಂದು ಸಂಜೆ 4 ಗಂಟೆಯಿಂದ ಅ.3ರ ಬೆಳಗ್ಗೆ 10 ಗಂಟೆ ವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.ಅ.2ರಂದು ಮಧ್ಯಾಹ್ನ 2ರಿಂದ 3ರಂದು ಬೆಳಗ್ಗೆ 10 ಗಂಟೆ ವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ, ಸಕಲೇಶಪುರ, ಮೈಸೂರು ಮಾರ್ಗವಾಗಿ ಸಂಚರಿಸುವುದು.
ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಭಾರಿ ವಾಹನಗಳು (ಟ್ಯಾಂಕರ್, ಕ್ಯಾಂಟರ್, ಸರಕು ಲಾರಿಗಳು) ಬಿಳಿಕೆರೆ, ಕೆ.ಆರ್.ನಗರ, ಹೊಳೆನರಸೀಪುರ ಹಾಸನ ಸಕಲೇಶಪುರ ಮಾರ್ಗವಾಗಿ ಸಂಚರಿಸುವುದು.ಮಡಿಕೇರಿ ನಗರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ:ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ.ಶಾಲೆ, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೊಳಿಸುವುದು. ಎಸ್.ಪಿ ಕಚೇರಿ ಜಂಕ್ಷನ್, ಮುಂದೆ ಐಟಿಐ ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.
ಮೈಸೂರು ರಸ್ತೆ ಮತ್ತು ಸಿದ್ದಾಪುರ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಚೈನ್‍ಗೇಟ್ ಮುಖಾಂತರ ತೆರಳಿ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಿಲುಗಡೆಗೊಳಿಸುವುದು. ವಿರಾಜಪೇಟೆ, ಮೂರ್ನಾಡು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ಮೇಕೇರಿ ಶಾಲಾ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಮಂಗಳೂರು ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್ ಮನೆ ನೇತಾಜಿ ಮೈದಾನ ಮತ್ತು ದುರ್ಗ ಭಗವತಿ ದೇವಸ್ಥಾನ ಮೈದಾನದಲ್ಲಿ ನಿಲುಗಡೆಗೊಳಿಸುವುದು. ಗಾಳಿಬೀಡು ಅಬ್ಬಿಪಾಲ್ಸ್, ಕಾಲೂರು ಕಡೆಯಿಂದ ಬರುವ ವಾಹನಗಳು ಎಫ್.ಎಂ.ಸಿ. ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸುವುದು. ಭಾಗಮಂಡಲ ಕಡೆಯಿಂದ ದಸರಾಕ್ಕೆ ಬರುವ ವಾಹನಗಳು ತಾಳತ್ ಮನೆ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನದಲ್ಲಿ ನಿಲುಗಡೆಗೊಳಿಸುವುದು.ಮೈಸೂರು, ಸಿದ್ದಾಪುರ ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆ ಮಾಡುವುದು.
ನಗರದಲ್ಲಿರುವ ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆ ಮತ್ತು ನಗರದ ಮದ್ಯಭಾಗದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದೇ ತಮ್ಮ ವಾಹನಗಳನ್ನು ಕ್ರೆಸೆಂಟ್ ಶಾಲೆ ಮೈದಾನ, ಹಿಂದೂಸ್ಥಾನ್ ಸ್ಕೂಲ್ ಮೈದಾನ, ಅಥವಾ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ನಿಲುಗಡೆಗೊಳಿಸುವುದು.ಅ.2ರಂದು ಸಂಜೆ 4 ಗಂಟೆಯಿಂದ ದಿನಾಂಕ ಅ.3ರ ಬೆಳಗ್ಗೆ 10 ಗಂಟೆ ವರೆಗೆ ನಗರದೊಳಗೆ ಇರುವ ಎಲ್ಲ ರಸ್ತೆಗಳು ನಿಲುಗಡೆ ರಹಿತ ರಸ್ತೆಗಳು ಆಗಿರುತ್ತದೆ. ಸಂಪಿಗೆ ಕಟ್ಟೆಯಿಂದ ಉಕ್ಕುಡ ಮಹದೇವಪೇಟೆ, ಎ.ವಿ. ಸ್ಕೂಲ್ ಜಂಕ್ಷನ್, ಕಾನ್ವೆಂಟ್ ಜಂಕ್ಷನ್ ವರೆಗಿನ ರಸ್ತೆಗಳು ನಿಲುಗಡೆ ರಹಿತ ರಸ್ತೆಗಳು ಆಗಿರುತ್ತದೆ. ಹೊಸ ಖಾಸಗಿ ಬಸ್ ನಿಲ್ದಾಣದಿಂದ ರೇಸ್ ಕೋರ್ಸ್ ರಸ್ತೆಗಾಗಿ ರಾಜಾಸೀಟ್ ರಸ್ತೆಯ ಮುಖಾಂತರ ಮಂಗೇರಿರಾ ಮುತ್ತಣ ರಸ್ತೆಯವರೆಗೂ ಮತ್ತು ಗಣಪತಿ ಬೀದಿ, ಮಹದೇವಪೇಟೆ, ಕಾಲೇಜು ರಸ್ತೆ, ಕೊಹಿನೂರು ರಸ್ತೆಯಲ್ಲಿ ಅ.3ರಂದು, ಸಂಜೆ 4 ಗಂಟೆವರೆಗೂ ನಿಲುಗಡೆ ರಹಿತ ರಸ್ತೆಗಳು ಆಗಿರುತ್ತದೆ.
ಕೆಎಸ್‌ಆರ್‌ಟಿಸಿ ಬಸ್‌ಗಳು ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಡಿಪೋ ಮತ್ತು ಆರ್‌ಎಂಸಿಯನ್ನು ಬಸ್ ನಿಲ್ದಾಣವಾಗಿ ಮಾರ್ಪಾಡಿಸಿಕೊಳ್ಳುವುದು ಮತ್ತು ನಗರದೊಳಗೆ ಸಂಚರಿಸದಂತೆ ವ್ಯವಸ್ಥೆ ಮಾಡಿಕೊಳ್ಳುವುದು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು. ಖಾಸಗಿ ಬಸ್‌ಗಳು ನಗರದೊಳಗೆ ಆಗಮಿಸದೇ ಜಿಟಿ ವೃತ್ತದಲ್ಲಿಯೇ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿ ತೆರಳುವುದು. ಮತ್ತು ಖಾಸಗಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ವಾಹನ ನಿಲ್ಲಿಸಲು ಅನುವು ಮಾಡಿಕೊಡುವುದು.ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳ:
ಎಫ್.ಎಂ.ಸಿ. ಕಾಲೇಜು ಮೈದಾನ, ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಐಟಿಐ ಕಾಲೇಜು ಮೈದಾನ, ಶಾಂತಿ ಚರ್ಚ್ ಮೈದಾನ (ದ್ವಿ ಚಕ್ರ ಮೋಟಾರು ಸೈಕಲ್ ಮಾತ್ರ), ಮ್ಯಾನ್ಸ್ ಕಾಂಪೌಂಡ್, ಜೂನಿಯರ್ ಕಾಲೇಜು ಮೈದಾನ, ಹೊಸ ಖಾಸಗಿ ಬಸ್ಸು ನಿಲ್ದಾಣ, ಮೇಕೇರಿ ಶಾಲಾ ಮೈದಾನ, ಕ್ರೆಸೆಂಟ್ ಶಾಲಾ ಮೈದಾನ, ತಾಳತ್‍ಮನೆ ನೇತಾಜಿ ಮೈದಾನ ಮತ್ತು ದುರ್ಗಾ ಭಗವತಿ ದೇವಾಲಯದ ಮೈದಾನ ಮತ್ತು ತಾಳತ್ ಮನೆ ಪಪ್ಪೀಸ್ ಗ್ಲಾಸ್ ಹೌಸ್ ಮೈದಾನ.ಗೋಣಿಕೊಪ್ಪ ತಾತ್ಕಾಲಿಕ ಮಾರ್ಗ ಬದಲಾವಣೆ: ಗೋಣಿಕೊಪ್ಪ ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದ ವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್‍ನಿಂದ ಕೆಪಿಟಿಸಿಎಲ್ ಕಚೇರಿ ವರೆಗೆ, ಪೊನ್ನಂಪೇಟೆ ರಸ್ತೆ, ಬೈಪಾಸ್ ರಸ್ತೆ ಜಂಕ್ಷನ್‍ನಿಂದ ಐಪಿ ಜಂಕ್ಷನ್ ವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆ ವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.
ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುವ ವಾಹನಗಳು, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಗೆ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು- ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್- ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವುದು.ಕೇರಳದಿಂದ ಪೆರುಂಬಾಡಿ-ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು, ಪೆರುಂಬಾಡಿ-ವಿರಾಜಪೇಟೆ-ಅಮ್ಮತ್ತಿ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಮೂಲಕ ಹೋಗುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ-ಕಾನೂರು-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು, ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು-ಬಾಳಲೆ-ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು.
ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು. ಮೈಸೂರು-ತಿತಿಮತಿ-ಗೋಣಿಕೊಪ್ಪ-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು, ತಿತಿಮತಿ-ಕೋಣನಕಟ್ಟೆ-ಪೊನ್ನಪ್ಪಸಂತೆ-ನಲ್ಲೂರು-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು.ಕುಟ್ಟ-ಶ್ರೀಮಂಗಲ-ಪೊನ್ನಂಪೇಟೆ-ಗೋಣಿಕೊಪ್ಪ-ಮೈಸೂರು ಕಡೆಗೆ ಹೋಗುವ ವಾಹನಗಳು, ಕುಟ್ಟ-ಶ್ರೀಮಂಗಲ, ಪೊನ್ನಂಪೇಟೆ, ನಲ್ಲೂರು, ಪೊನ್ನಪ್ಪಸಂತೆ, ಕೋಣನಕಟ್ಟೆ, ತಿತಿಮತಿ ಮಾರ್ಗವಾಗಿ ಸಂಚರಿಸುವುದು. ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಬಾಳಲೆ ಕಡೆಗೆ ಹೋಗುವ ವಾಹನಗಳು, ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು.
ಸಾರ್ವಜನಿಕರ ವಾಹನ ನಿಲುಗಡೆ ಸ್ಥಳಗಳು:ದಸರಾ ವೀಕ್ಷಣೆಗೆ ಗೋಣಿಕೊಪ್ಪಕ್ಕೆ ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನ, ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ, ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ. ತಿತಿಮತಿ ಮತ್ತು ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ-ಗೋಣಿಕೊಪ್ಪ ಆರ್.ಎಂ.ಸಿ. ಆವರಣದಲ್ಲಿ ಹಾಗೂ ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ-ಪಾಲಿಬೆಟ್ಟ ರಸ್ತೆಯಲ್ಲಿ ಶಾಸ್ತಾ ಇಂಡಸ್ಟ್ರೀಸ್‌ನಿಂದ ಅತ್ತೂರು ಕಡೆಗೆ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.