ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಾಗರಹೊಳೆಯಲ್ಲಿ 1.80 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಮಹರ್ಷಿ ವಾಲ್ಮೀಕಿ ಅದಿವಾಸಿ ಬುಡಕಟ್ಟು ವಸತಿ ಶಾಲೆಯ ನವೀಕರಣ ಕಟ್ಟಡವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಶುಕ್ರವಾರ ಉದ್ಘಾಟಿಸಿದರು.ಬಳಿಕ ಶಾಲಾ ಕೊಠಡಿ ವೀಕ್ಷಿಸಿದ ಸಚಿವರು, ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಿದರು.
ಶಿಕ್ಷಕರು ಪಾಠ ಪ್ರವಚನ ಮನ ಮುಟ್ಟುವಂತೆ ಹೇಳುತ್ತಿದ್ದಾರೆಯೇ, ಪ್ರತಿನಿತ್ಯ ಆಹಾರದ ಪಟ್ಟಿಯಂತೆ ಊಟೋಪಾಚಾರ ಕಲ್ಪಿಸಲಾಗುತ್ತಿದೆಯೇ, ಮೊಟ್ಟೆ ಬಾಳೆಹಣ್ಣು, ಚಿಕ್ಕಿ ವಿತರಿಸಲಾಗುತ್ತಿದೆಯೇ ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.ನಂತರ ವಿದ್ಯಾರ್ಥಿಗಳು ಮಲಗುವ ಕೊಠಡಿ, ಆಹಾರ ಸಾಮಗ್ರಿ ಕೊಠಡಿ ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಸಚಿವರು, ಹಿಂದೆ ವಸತಿ ಶಾಲೆಯಲ್ಲಿ ಕುಂದು ಕೊರತೆಗಳು ಇತ್ತು. ಆ ನಿಟ್ಟಿನಲ್ಲಿ 1.80 ಕೋಟಿ ರು. ವೆಚ್ಚದಲ್ಲಿ ಕಟ್ಟಡ ನವೀಕರಣ ಜತೆಗೆ, ಹೆಚ್ಚುವರಿ ಕೊಠಡಿ ನಿರ್ಮಾಣ, ಸೋಲಾರ್ ಅಳವಡಿಕೆ, ಆಟದ ಮೈದಾನ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಹಲವು ಕೆಲಸ ಕೈಗೊಳ್ಳಲಾಗಿದೆ ಎಂದು ಎನ್.ಎಸ್. ಭೋಸರಾಜು ತಿಳಿಸಿದರು.ವಸತಿ ಶಾಲೆಯಲ್ಲಿ ಇನ್ನೂ ಆಗಬೇಕಿರುವ ಕೆಲಸಗಳಿಗೆ ಐಟಿಡಿಪಿ ಇಲಾಖೆಯಿಂದ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನ ಹರಿಸುವುದು ಶಿಕ್ಷಕರು ಹಾಗೂ ಅಧಿಕಾರಗಳ ಜವಾಬ್ದಾರಿ ಆಗಿದೆ ಎಂದು ಸಚಿವರು ತಾಕೀತು ಮಾಡಿದರು.
ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರಂತೆ ಆದಿವಾಸಿ ಮಕ್ಕಳು ಮುಖ್ಯವಾಹಿನಿಗೆ ಬರಬೇಕು ಎಂದರು.ಹಾಗೆಯೇ ನಾಗರಹೊಳೆ ವ್ಯಾಪ್ತಿಯಲ್ಲಿ ಬಾಕಿ ಇರುವ ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ವಿತರಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಆಟದ ಸಾಮಗ್ರಿಯನ್ನು ಸಚಿವರು ವಿತರಿಸಿದರು.ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಜೆ.ಎಂ.ಸೋಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಆರ್.ಜಿ.ಸಚಿನ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾದ ಬಿ. ಹಲಸಬಾಳ ಇತರರು ಇದ್ದರು.