ಮಡಿಕೇರಿ: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

KannadaprabhaNewsNetwork |  
Published : Jan 22, 2025, 12:30 AM IST
ಚಿತ್ರ : 21ಎಂಡಿಕೆ4 : ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.  | Kannada Prabha

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಮಂಗಳವಾರ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಮಂಗಳವಾರ ಆಚರಿಸಲಾಯಿತು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, 12ನೇ ಶತಮಾನದಲ್ಲಿ ಬಸವಣ್ಣ ಸೇರಿದಂತೆ ಎಲ್ಲಾ ವಚನಕಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತಾಗಬೇಕು. ಅಂಬಿಗರ ಚೌಡಯ್ಯ ಅವರು ಸಮಾಜಕ್ಕೆ ನೀಡಿರುವ ಸುಧಾರಣೆ ಮತ್ತು ಸಂದೇಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಗಾಳಿಬೀಡು ನವೋದಯ ವಸತಿ ಶಾಲೆಯ ಉಪನ್ಯಾಸಕ ಮಾರುತಿ ದಾಸಣ್ಣವರ್ ಮಾತನಾಡಿ, ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಸಮಾಜದಲ್ಲಿನ ಮೌಢ್ಯಗಳನ್ನು ಹೋಗಲಾಡಿಸಿ ಸಮಾನತೆಯ ಆಂದೋಲನವನ್ನೇ ಹುಟ್ಟು ಹಾಕಿದ ನಿಜ ಚಳವಳಿ ಎಂದರೆ ಅದು ವಚನ ಚಳುವಳಿ ಎಂದು ಮಾರುತಿ ದಾಸಣ್ಣವರ್ ವರ್ಣಿಸಿದರು.

ತಳ ಸಮುದಾಯದವರು ತಮ್ಮ ಜಾತಿ ಹೇಳಿದರೆ ಎಲ್ಲಿ ಜನ ನಮ್ಮನ್ನು ಕೀಳಾಗಿ ಕಾಣುವರೋ ಎಂಬ ಅಳುಕಿನಲ್ಲಿರುವ ಇಂದಿನ ದಿನಮಾನಗಳಲ್ಲೂ ಈ ಜಾತಿಯ ಕೀಳರಿಮೆ ದೂರವಾಗಿಲ್ಲವೆಂಬುದು ನಮ್ಮ ಬಹು ದೊಡ್ಡ ದುರಂತ. ಆದರೆ ಅಂದು ಪ್ರತಿಯೊಬ್ಬ ಶರಣರೂ ತನ್ನ ಜಾತಿಯನ್ನು ತನ್ನ ಹೆಸರಿಗಿಂತ ಮೊದಲು ಇಟ್ಟುಕೊಂಡು ತನ್ನ ಜಾತಿಯನ್ನು ಅಭಿಮಾನದಿಂದ ಹೇಳಿಕೊಳ್ಳುತ್ತಿದ್ದ. ಇದು ನಿಜಕ್ಕೂ ಸೋಜಿಗವೇ ಎಂದರು.

ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ, ಮಡಿವಾಳ ಮಾಚಯ್ಯ, ಕುಂಬಾರ ಗುಂಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆಯವರೆಗೂ ತಮ್ಮ ವೃತ್ತಿಗಳನ್ನು ಹೇಳಿಕೊಳ್ಳುವ ಈ ಪರಂಪರೆ ಎಷ್ಟೊಂದು ಅದ್ಭುತ ಎಂದು ಮಾರುತಿ ದಾಸಣ್ಣವರ್ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿದೇಶಕಿ ಮಂಜುಳ ಮಾತನಾಡಿ, ಅಂಬಿಗರ ಚೌಡಯ್ಯ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ಪ್ರವೀಣ್ ಕುಮಾರ್, ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯ ಅನಸೂಯ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ಶಿಕ್ಷಕ ಮಂಗಳಗೌರಿ, ಶುಭ, ಮಣಜೂರು ಮಂಜುನಾಥ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ
21ರಿಂದ ರಾಜ್ಯಾದ್ಯಂತ ಪಲ್ಸ್‌ ಪೋಲಿಯೋ: ಗುಂಡೂರಾವ್‌