- ಹಿರೇಮಳಲಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ
ಚನ್ನಗಿರಿ: 12ನೇ ಶತಮಾನದ ಶಿವಶರಣರಲ್ಲಿ ಒಬ್ಬರಾದ ಶ್ರೀ ಮಡಿವಾಳ ಮಾಚಿದೇವ ಅವರು ಖಡ್ಗವನ್ನು ಹಿಡಿದು ಹೋರಾಟ ಮಾಡಿ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ವೀರ ಮಡಿವಾಳ ಮಾಚಿದೇವರಾಗಿದ್ದಾರೆ. ಇಂತಹ ಮಹಾನ್ ಶರಣನಿಂದ ವಚನ ಸಾಹಿತ್ಯ ಉಳಿದು ಇಂದಿಗೂ ಜೀವಂತವಾಗಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಶನಿವಾರ ತಾಲೂಕಿನ ಹಿರೇಮಳಲಿ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಶಾಸಕನಾಗಿದ್ದ ಸಂದರ್ಭ ಚನ್ನಗಿರಿ ಪಟ್ಟಣ ಮತ್ತು ನಲ್ಲೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿಕೊಳ್ಳಲು ನಿವೇಶನಗಳನ್ನು ನೀಡಿದ್ದೆ. ಕೋಗಲೂರು ಗ್ರಾಮದ ದೇವಾಲಯದ ಅಭಿವೃದ್ಧಿಗೆ ಅನುಧಾನ ನೀಡಿದ್ದೆ. ಮಡಿವಾಳ ಸಮಾಜಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ಇರಲಿ ಬಿಡಲಿ ಈ ಸಮಾಜಕ್ಕೆ ಕೈಲಾದ ಕೆಲಸ ಮಾಡಿಕೊಡುತ್ತೇನೆ ಎಂದರು.ಜೀವವೈವಿಧ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್ ಮಾತನಾಡಿ, ಸಮಾಜದ ಸಂಘಟನೆಗೆ ಇಂತಹ ಜಯಂತ್ಯುತ್ಸವಗಳು ಸಹಕಾರಿಯಾಗಿವೆ. ಮಾಚಿದೇವ ಶರಣರ ವಿಚಾರಧಾರೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.
ಸಮಾರಂಭಕ್ಕೂ ಮುನ್ನ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿಟ್ಟು ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
- - -
ಚನ್ನಗಿರಿ ತಾಲೂಕಿನ ಹಿರೇಮಳಲಿಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಸಮಾರಂಭವನ್ನು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.