ಧಾರ್ಮಿಕ ಶಿಕ್ಷಣ ಜತೆ ನೈತಿಕತೆ, ವ್ಯಕ್ತಿತ್ವ ರೂಪಿಸುವ ಮದರಸಾ ವ್ಯವಸ್ಥೆ: ರೆಹಮಾನ್ ಖಾನ್

KannadaprabhaNewsNetwork |  
Published : Jun 10, 2026, 02:30 AM IST
ಫೋಟೋವಿವರ- (9ಎಚ್‌ಪಿಟಿ5) ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕದ ಮದರಸಾಗಳು: ಚಾರಿತ್ರಿಕ ಅಧ್ಯಯನ”  ವಿಷಯ ಕುರಿತು ಸಂಶೋಧನಾ ವಿದ್ಯಾರ್ಥಿ ರೆಹಮಾನ್ ಖಾನ್ ಮಾತನಾಡಿದರು | Kannada Prabha

ಸಾರಾಂಶ

ಮಧ್ಯಕಾಲೀನ ಕರ್ನಾಟಕದ ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳಾದ ಮದರಸಾಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಹೊಸಪೇಟೆ: ಮದರಸಾ ಎಂಬುದು ಕೇವಲ ಧಾರ್ಮಿಕ ಶಿಕ್ಷಣ ನೀಡುವ ಸಂಸ್ಥೆಯಲ್ಲ; ಅದು ನೈತಿಕತೆ, ವ್ಯಕ್ತಿತ್ವ ವಿಕಾಸ, ಸಾಮಾಜಿಕ ಜವಾಬ್ದಾರಿಯನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯಾಗಿದೆ ಎಂದು ಸಂಶೋಧನಾ ವಿದ್ಯಾರ್ಥಿ ರೆಹಮಾನ್ ಖಾನ್ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಸಂಶೋಧನಾರ್ಥಿಗಳಿಂದ ಆಯೋಜಿಸಲಾಗಿದ್ದ ಪಾಕ್ಷಿಕ ಮಾತು- 51 ಕಾರ್ಯಕ್ರಮವು ನಳಂದ ಸಭಾಂಗಣದಲ್ಲಿ ಉತ್ತರ ಕರ್ನಾಟಕದ ಮದರಸಾಗಳು: ಚಾರಿತ್ರಿಕ ಅಧ್ಯಯನ” ಎಂಬ ವಿಷಯ ಮಂಡಿಸಿ ಅವರು ಮಾತನಾಡಿದರು.

ಮಧ್ಯಕಾಲೀನ ಕರ್ನಾಟಕದ ಇತಿಹಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳಾದ ಮದರಸಾಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಹಮನಿ, ಆದಿಲ್‌ಶಾಹಿ ಆಡಳಿತಾವಧಿಯಲ್ಲಿ ಉತ್ತರ ಕರ್ನಾಟಕವು ಶಿಕ್ಷಣ, ಸಂಸ್ಕೃತಿ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಂಡಿತ್ತು. ಮಸೀದಿ, ಮಕ್ತಬ್, ಖಾನ್‌ಖಾಗಳು ಮದರಸಾ ಶಿಕ್ಷಣದ ಅವಿಭಾಜ್ಯ ಅಂಗಗಳಾಗಿವೆ. ಇವುಗಳ ಮೂಲಕ ಇಸ್ಲಾಮಿಕ್ ಜ್ಞಾನ, ನೈತಿಕ ಮೌಲ್ಯಗಳು, ಸಾಮಾಜಿಕ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಕರ್ನಾಟಕದಲ್ಲಿ 1360 ಮದರಸಾಗಳು ವಕ್ಫ್ ಬೋರ್ಡ್‌ನಡಿ ನೋಂದಣಿಯಾಗಿವೆ. ಮಸೀದಿಯೊಂದಿಗೆ ಕಾರ್ಯ ನಿರ್ವಹಿಸುವ ಮಕ್ತಬ್‌ಗಳನ್ನು ಮದರಸಾಗಳು ಎಂದು ನೋಂದಾಯಿಸಿಕೊಂಡಿರುವುದು ಕಂಡುಬಂದಿದೆ. ಇದಕ್ಕೆ ಮದರಸಾ ಎಂದರೆ ಏನು ಎಂಬುದಕ್ಕೆ ಸರಿಯಾದ ಚೌಕಟ್ಟನ್ನು ಹಾಕಿಕೊಳ್ಳದಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಉತ್ತರ ಕರ್ನಾಟಕದಲ್ಲಿ 293ಕ್ಕೂ ಹೆಚ್ಚು ನೋಂದಾಯಿತ ಮದರಸಾಗಳಿವೆ ಎಂದರು.

ಮದರಸಾಗಳ ಪಠ್ಯಕ್ರಮವು ಕಾಲಾನುಸಾರ ಬದಲಾವಣೆಗೊಂಡಿದ್ದು, ಇಂಗ್ಲಿಷ್, ಗಣಿತ, ವಿಜ್ಞಾನ, ಕಂಪ್ಯೂಟರ್ ಶಿಕ್ಷಣ ಹಾಗೂ ಇತರೆ ಆಧುನಿಕ ವಿಷಯಗಳನ್ನು ಒಳಗೊಂಡಿದೆ. ಕರ್ನಾಟಕ ಸರ್ಕಾರದ ''''''''ಮದರಸಾ ಪ್ಲಸ್'''''''' ಯೋಜನೆ ಹಾಗೂ ಕೇಂದ್ರ ಸರ್ಕಾರದ ಆಧುನೀಕರಣ ಕಾರ್ಯಕ್ರಮಗಳು ಮದರಸಾಗಳನ್ನು ಸಮಕಾಲೀನ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸಲು ನೆರವಾಗಿವೆ ಎಂದು ಹೇಳಿದರು.

ಮದರಸಾಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಆರ್ಥಿಕ ಸಂಪನ್ಮೂಲಗಳ ಕೊರತೆ, ಮೂಲಸೌಕರ್ಯಗಳ ಅಭಾವ, ಶಿಕ್ಷಕರ ವೇತನ ಸಮಸ್ಯೆ, ಸೀಮಿತ ಉದ್ಯೋಗಾವಕಾಶಗಳು ಪ್ರಮುಖ ಸಮಸ್ಯೆಗಳಾಗಿವೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅನೇಕ ಮದರಸಾಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ, ಕ್ರೀಡಾ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿಲ್ಲ ಎಂಬ ಅಂಶವು ಕಂಡುಬಂದಿದೆ. ಸರ್ಕಾರದ ಯೋಜನೆಗಳು ಸಫಲಗೊಳ್ಳಬೇಕಾದರೆ ಮದರಸಾಗಳ ಕುರಿತು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವ ಅವಶ್ಯಕತೆ ಇದೆ ಎಂದರು.

ಬಹಮನಿ ಸುಲ್ತಾನರ ಕಾಲದಲ್ಲಿ ಮದರಸಾಗಳಿಗೆ ವಿಶೇಷ ಪ್ರೋತ್ಸಾಹ ದೊರೆತಿದೆ. ಉಚಿತ ಶಿಕ್ಷಣ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ವಿಶೇಷವಾಗಿ 1472ರಲ್ಲಿ ಮಹಮೂದ್ ಗವಾನ್ ಬೀದರ್‌ನಲ್ಲಿ ಸ್ಥಾಪಿಸಿದ ಮದರಸಾವು ಭಾರತದ ಪ್ರಮುಖ ವಿದ್ಯಾಕೇಂದ್ರಗಳಲ್ಲಿ ಒಂದಾಗಿತ್ತು. ಈ ಮದರಸಾದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ತರ್ಕಶಾಸ್ತ್ರ, ಸಾಹಿತ್ಯ, ಇತಿಹಾಸ, ಆಡಳಿತ, ಭಾಷಾ ಅಧ್ಯಯನಕ್ಕೂ ಅವಕಾಶವಿತ್ತು. ಮುಸ್ಲಿಮರಷ್ಟೇ ಅಲ್ಲದೇ ಇತರೆ ಅನ್ಯ ಧರ್ಮಗಳ ವಿದ್ಯಾರ್ಥಿಗಳಿಗೂ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ವಿರೂಪಾಕ್ಷಿ ಪೂಜಾರಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟೇಶ್ವರ: ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಅಶೋಕ್ ಪೂಜಾರಿ ಒತ್ತಾಯ
ಪ್ರಕೃತಿ ವಿಕೋಪ ನಿರ್ವಹಣೆ: ಡಾ. ಮಂತರ್‌ ಗೌಡ ಸೂಚನೆ