ಕನ್ನಡಪ್ರಭ ವಾರ್ತೆ ನಾಪೋಕ್ಲು
ಸ್ಥಳೀಯ ಕಲ್ಲುಮೊಟ್ಟೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ನಡೆದ ನಮಾಮಿ ಕಾವೇರಿ ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಮಾಮಿ ಕಾವೇರಿ ತಂಡದ ಪ್ರಮುಖರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಶೌರ್ಯ ತಂಡ ಹಾಗೂ ಯೋಜನೆಯ ಕಾರ್ಯಕರ್ತರಿಗೆ ನಮಾಮಿ ಕಾವೇರಿ ಯೋಜನೆಗೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮದಲ್ಲಿ ವಿಶೇಷ ತಂಡಗಳ ರಚನೆ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಭಾಗಮಂಡಲ ಮತ್ತು ನಾಪೋಕ್ಲು ಗ್ರಾಮಗಳಲ್ಲಿ ಈಗಾಗಲೇ ಸ್ಥಳೀಯ ಕಾರ್ಯಕರ್ತರನ್ನು ಒಳಗೊಂಡಂತೆ ಸಭೆ ನಡೆಸಲಾಗಿದೆ. ಪ್ರತಿ ತಿಂಗಳ ಹುಣ್ಣಿಮೆಯಂದು ನದಿ ತಟದಲ್ಲಿ ವಿವಿಧಡೆ ಕಾವೇರಿಗೆ ಮಹಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಿ ತಂಡಗಳನ್ನು ರಚಿಸುವ ಚಿಂತನೆ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು. ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾವೇರಿ ಸಂರಕ್ಷಣೆಯ ಬಗ್ಗೆ ಹೋರಾಟ ಮಾಡುತ್ತಿರುವ ಕಾವೇರಿ ನದಿ ಸ್ವಚ್ಛತಾ ಸಮಿತಿ ಪ್ರಮುಖರಿಗೆ ಎಲ್ಲ ರೀತಿಯ ಸಹಯೋಗ ನೀಡಲಾಗುವುದು ಎಂದು ಅವರು ಹೇಳಿದರು .
ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರತೀಪ ಬಿ.ಎಂ., ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್, ಮೇಲ್ವಿಚಾರಕರಾದ ಸುನಿಲ್ ಕುಮಾರ್, ಶೌರ್ಯ ತಾಲೂಕು ಮಾಸ್ಟರ್ ಬಾಳೆಯಡ ದಿವ್ಯ, ಒಕ್ಕೂಟ ಅಧ್ಯಕ್ಷ ಅಜಿತಾ, ಸೇವಾ ಪ್ರತಿನಿಧಿ ಚಂದ್ರಕಲಾ, ಉಮಾಲಕ್ಷ್ಮಿ, ಆಶಾಲಾತ, ಅಜಿತ ,ಶ್ರೀ ಕಿರಣ್ ಸಂಘದ ಸದಸ್ಯರು, ಶೌರ್ಯ ಸ್ವಯಂ ಸೇವಕರು ಮತ್ತಿತರರು ಇದ್ದರು.ಕಾರ್ಯಕ್ರಮಗಳಲ್ಲಿ ನಮಾಮಿ ಕಾವೇರಿ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಾಪೊಕ್ಲು ಚೆರಿಯ ಪರಂಬು ಕಾವೇರಿ ನದಿ ತಟದಲ್ಲಿ ಮಹಾ ಆರತಿ ಕಾರ್ಯಕ್ರಮ ಹಾಗೂ ಸ್ಥಳೀಯ ಸ್ಮಶಾನದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.