ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆ ದೇವರು, ಸ್ವತಂತ್ರ ಸಿದ್ದಲಿಂಗೇಶ್ವರರು ಪವಾಡ ಪುರುಷರಾಗಿದ್ದು, 12ನೇ ಶತಮಾನದಲ್ಲಿ ಗವಿಮಠದಲ್ಲಿ ಶಿವೈಕ್ಯರಾಗಿದ್ದಾರೆ. ಗವಿಮಠದಲ್ಲಿ ಶ್ರೀಗಳ ಗದ್ದುಗೆಯಿದ್ದು ಸುತ್ತಮುತ್ತಲ ಹತ್ತಾರು ಹಳ್ಳಿಗಳ ಆರಾದ್ಯದೈವಾಗಿರುವ ಸಿದ್ದಲಿಂಗೇಶ್ವರರ ರಥೋತ್ಸವವನ್ನು ಪೀಠಾಧ್ಯಕ್ಷ ಶ್ರೀಸ್ವತಂತ್ರ ಚನ್ನವೀರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಸಲಾಯಿತು.
ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಬೆಳಗ್ಗೆ ಶ್ರೀಕ್ಷೇತ್ರಕ್ಕೆ ಆಗಮಿಸಿ ಸಹಸ್ರ ರುದ್ರಾಭಿಷೇಕದಲ್ಲಿ ತಮ್ಮ ಪತ್ನಿ ರಮಾ ಅವರೊಂದಿಗೆ ಪಾಲ್ಗೊಂಡು ತಾಲೂಕಿನ ಜನರ ಪಾಲಿಗೆ ನೂತನ ವರ್ಷ ಚೆನ್ನಾಗಿರಲಿ ಎಂದು ಪ್ರಾರ್ಥಿಸಿದರು.ತಾಲೂಕಿನ ಬಳ್ಳೇಕೆರೆ, ವಿಠಲಾಪುರ, ಅರಳಕುಪ್ಪೆ, ನಾಟನಹಳ್ಳಿ, ಹಳೆಯೂರು, ಯಗಚಗುಪ್ಪೆ, ಕಾಪನಹಳ್ಳಿ, ಕಾಳೇಗೌಡನಕೊಪ್ಪಲು, ಯಡಹಳ್ಳಿ, ಕಟ್ಟಹಳ್ಳಿ, ಬೂಕನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ರಥಕ್ಕೆ ಹಣ್ಣು ಮತ್ತು ಜವನವನ್ನು ಎಸೆಯುವ ಮೂಲಕ ಇಷ್ಠಾರ್ಥಕ್ಕೆ ಪ್ರಾರ್ಥನೆ ಸಲ್ಲಿಸಿದರು.
ನೂರಾರು ಯುವಕರು ಜಾತ್ರೆಗೆ ಕುಟುಂಬ ಸಮೇತ ಹಾಜರಾಗಿ ಅಡ್ಡಪಲ್ಲಕ್ಕಿ ಹಾಗೂ ಮೂಲಾನುಷ್ಠಾನದ ಗವಿದರ್ಶನವನ್ನು ಕೂಡಾ ಮಾಡುವ ಮೂಲಕ ಶ್ರೀಗಳ ಕೃಪೆಗೆ ಪಾತ್ರರಾದರು. ಫೆಬ್ರವರಿ 6ರ ಶುಕ್ರವಾರ ಬಳ್ಳೇಕೆರೆ ಗ್ರಾಮಸ್ಥರಿಂದ ತೆಪ್ಪೋತ್ಸವ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.