ಸೋಮರಡ್ಡಿ ಅಳವಂಡಿ
ಕೊಪ್ಪಳ : ಮೈಸೂರು ಪಾಕ, ಮಾದಲಿ, ಬೂಂದಿ, ಹಾಲು, ತುಪ್ಪ, ಮಿಕ್ಸ್ ಬಾಜಿ, ದಾಲ್, ಕೆಂಪು ಚಟ್ನಿ, ಪುಡಿಚಟ್ನಿ, ರೊಟ್ಟಿ, ಅನ್ನ-ಸಾಂಬರ್, ಜತೆಗೆ ಉಪ್ಪಿನಕಾಯಿ.....
ಇದು, ಯಾವುದೋ ರೆಸ್ಟೋರೆಂಟ್‌ನಲ್ಲಿ ನೇತು ಹಾಕಿದ ತಿನಿಸುಗಳ ಮೆನ್ಯು ಅಲ್ಲ, ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಎರಡನೇ ದಿನ ಬಡಿಸಿದ ಖಾದ್ಯದ ವಿವರ.
ಇದೆಲ್ಲವನ್ನು ಸವಿದ ವಿಜಯಪುರದಿಂದ ಬಂದಿದ್ದ ಭಕ್ತ ಮರಿಮಲ್ಲಪ್ಪ ಅಗಸಿನಮನಿ ಅವರು ಹೇಳಿದ್ದು ಹೀಗೆ, ಇದು ದಾಸೋಹದ ಪ್ರಸಾದವಲ್ಲ, ದಿಬ್ಬಣ್ಣದೂಟ ಮೀರಿಸಿದ ಪ್ರಸಾದ ಎಂದು ಉದ್ಗಾರ ತೆಗೆದರು.
ಮಹಾದಾಸೋಹದಲ್ಲಿ ಪ್ರಸಾದ ಸವಿಯುತ್ತಿದ್ದವರು ಗವಿಸಿದ್ಧೇಶ್ವರ ಮಹಾದಾಸೋಹದ ವೈಭವವನ್ನು ಬಗೆಬಗೆಯಾಗಿ ಬಣ್ಣಿಸುತ್ತಿರುವುದು ಕಂಡುಬಂದಿತು. ನಾನು ಅದಷ್ಟೋ ಜಾತ್ರೆಗಳಿಗೆ ಹೋಗಿದ್ದೇನೆ, ಮಠಗಳಿಗೆ ಹೋಗಿದ್ದೇನೆ. ಎಲ್ಲಿಯೂ ಇಷ್ಟೊಂದು ಬಗೆಯ ಖಾದ್ಯವನ್ನು ಪ್ರಸಾದದಲ್ಲಿ ನೀಡುವುದಿಲ್ಲ. ಅನ್ನ-ಸಾಂಬರ್, ಅಬ್ಬಬ್ಬಾ ಎಂದರೆ ಒಂದು ತರಹದ ಸಿಹಿ ನೀಡುತ್ತಾರೆ. ಆದರೆ, ಈ ಮಹಾದಾಸೋಹದಲ್ಲಿ ನಿತ್ಯವೂ ಎರಡು, ಮೂರು ಬಗೆಯ ಸಿಹಿ ತಿನಿಸು, ಹಾಲು, ತುಪ್ಪ ನೀಡುತ್ತಾರೆ. ಜತೆಗೆ ಎರಡನೇ ದಿನ ಮಿರ್ಚಿ ಭಜ್ಜಿಯನ್ನು ನೀಡುತ್ತಾರೆ. ಅದೂ ಕೇಳಿದಷ್ಟು. ಯಾವುದಕ್ಕೂ ಮಿತಿ ಇಲ್ಲ.
ಮೈಸೂರು ಪಾಕ ಎಷ್ಟಾದರೂ ತಿನ್ನಿ, ಮಾದಲಿಯನ್ನಾದರೂ ತಿನ್ನಿ, ಅಷ್ಟೇ ಯಾಕೆ ಕೊಂಡು ತಿನ್ನುವಾಗ ಒಂದೆರಡು ಮಾತ್ರ ತಿನ್ನುವ ಮಿರ್ಚಿ ಭಜ್ಜಿಯನ್ನು ಸಹ ಇಲ್ಲಿ ಅನಿಯಮಿತ ನೀಡುತ್ತಾರೆ. ಇಂಥ ಭರಪೂರ ಪ್ರಸಾದವನ್ನು ನಾನಂತೂ ಎಲ್ಲಿಯೂ ನೋಡಿಲ್ಲ ಎನ್ನುತ್ತಾರೆ ಧಾರವಾಡದಿಂದ ಬಂದಿದ್ದ ದೇವರಮನೆ ಮಹಾಂತೇಶ ಅವರು.
ರಾಜ್ಯ ಅಷ್ಟೇ ಅಲ್ಲ, ದೇಶದ ಯಾವ ಮೂಲೆಯಲ್ಲಿನ ಮಠಗಳಲ್ಲಿಯೂ ಮಹಾದಾಸೋಹದಲ್ಲಿ ಇಷ್ಟೊಂದು ಬಗೆಯ ವೈವಿಧ್ಯಮಯ ಆಹಾರ ನೀಡುವುದಿಲ್ಲ. ಅದು ಕೇವಲ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಹಾದಾಸೋಹದಲ್ಲಿ ಎಂದೇ ಪರಸ್ಪರ ಮಾತನಾಡುತ್ತಿರುವುದು ಮಹಾದಾಸೋಹದ ಮಂಟಪದಲ್ಲಿ ಸಾಮಾನ್ಯವಾಗಿ ಕೇಳುತ್ತಿತ್ತು.
120 ಕ್ವಿಂಟಲ್ ಅಕ್ಕಿ, 5 ಲಕ್ಷ ಮೈಸೂರು ಪಾಕ ಬಳಕೆಯಾಗಿದೆ. ಜತೆಗೆ ಕ್ವಿಂಟಲ್ ಗಟ್ಟಲೇ ಮಾದಲಿಯೂ ಬಳಕೆಯಾಗಿದೆ. ಬಂದಿದ್ದೇ ಟನ್ ಗಟ್ಟಲೇ ಇರುವುದರಿಂದ ಸಿಹಿ ಪದಾರ್ಥ ಬಳಕೆ ಲೆಕ್ಕಕ್ಕೆ ಸಿಗುವುದಿಲ್ಲ ಎನ್ನುತ್ತಾರೆ ಮಹಾದಾಸೋಹದ ಉಸ್ತುವಾರಿ ವಹಿಸಿರುವ ರಾಮನಗೌಡ ಅವರು.
ನಾವು ಇಲ್ಲಿ ಈಗ ಲೆಕ್ಕ ಹಾಕುವುದು ಕೇವಲ ಅಕ್ಕಿಯನ್ನು ಮಾತ್ರ. ಮಿಕ್ಕಿದ್ದು ಯಾವುದು ಲೆಕ್ಕಕ್ಕೆ ಸಿಗುವುದಿಲ್ಲ. ಮೊದಲ ದಿನವೇ ಒಂದೂವರೆಯಿಂದ ಎರಡು ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿರಬಹುದು ಎಂದು ಅಂದಾಜಿಸಲಾಗಿದ್ದು, ರಥೋತ್ಸವದ ಮಾರನೇಯ ದಿನ ಇದು ಮತ್ತಷ್ಟು ಜಾಸ್ತಿಯಾಗಿದ್ದು, ಎರಡೂವರೆಯಿಂದ ಮೂರು ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡುವ ಸಾಧ್ಯತೆ ಇದೆ ಎನ್ನುತ್ತಾರೆ.
ಜಾತ್ರಾ ಮಹೋತ್ಸವದಲ್ಲಿ ಎರಡನೇ (ಮಂಗಳವಾರ ಒಂದೇ ದಿನ) ದಿನ ಐದು ಲಕ್ಷ ಮಿರ್ಚಿ ಭಜ್ಜಿ ಬಳಕೆಯಾಗಿದೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಮಿರ್ಚಿಯ ವೈಭವವೇ ವೈಭವ. ಕೊಪ್ಪಳದ ಗೆಳೆಯರ ಬಳಗದಿಂದ ಮಿರ್ಚಿ ಸಿದ್ದಪಡಿಸಿ ಭಕ್ತರಿಗೆ ಉಣಬಡಿಸುತ್ತಾರೆ. ಮಿರ್ಚಿಗೆ ೨೫ ಕ್ವಿಂಟಲ್ ಹಸಿಕಡ್ಲಿಬೇಳೆ ಹಿಟ್ಟು, ೨೨ ಕ್ವಿಂಟಲ್ ಹಸಿ ಮೆಣಸಿನಕಾಯಿ, ೨೫ ಕೆಜಿ ಅಜವಾನ, ೨೫ ಕೆಜಿ ಸೋಡಾಪುಡಿ, ೭೫ ಕೆಜಿ ಉಪ್ಪು, ೬೦ ಸಿಲಿಂಡರ್, ೧೨ ಬ್ಯಾರಲ್ ಒಳ್ಳೆಣ್ಣಿ ಬಳಕೆಯಾಗಿದ್ದು, ೨೫ ಗ್ರಾಮಗಳ ಜನರು ಸರದಿಯಲ್ಲಿ ಮಿರ್ಚಿ ಭಜ್ಜಿ ಮಾಡಿದ್ದಾರೆ.
85 ಟನ್ ಸಿಹಿ ಪದಾರ್ಥ
ವಿವಿಧ ಸಿಹಿ ಪದಾರ್ಥಗಳು ೫೦೦ ಕ್ವಿಂಟಲ್‌ನಷ್ಟು ಬಂದಿದ್ದರೆ, ೩೫೦ ಕ್ವಿಂಟಲ್‌ಗೂ ಮಿಗಿಲಾಗಿ ಮಾದಲಿ ಬಂದಿದೆ. ೧೨೦೦ ಕ್ವಿಂಟಲ್ ಅಕ್ಕಿ, ೧೯-೨೦ ಲಕ್ಷ ರೊಟ್ಟಿ, ತಲಾ ೧೦೦ ಕ್ವಿಂಟಲ್ ತೊಗರಿ ಬೇಳೆ, ಹೆಸರು ಬೇಳೆ ಬಂದಿವೆ. ಜ. 1ರಿಂದಲೇ ಪ್ರಾರಂಭವಾಗಿರುವ ಮಹಾದಾಸೋಹದಲ್ಲಿ ಇದುವರೆಗೂ ನಾಲ್ಕಾರು ಲಕ್ಷ ರೊಟ್ಟಿಗಳು ಮತ್ತು 400 ಕ್ವಿಂಟಲ್ ಅಕ್ಕಿ ಬಳಕೆಯಾಗಿರುವ ಲೆಕ್ಕಾಚಾರ ಮಾತ್ರ ಇದ್ದು, ಮಿಕ್ಕಿದ್ದು ಗವಿಸಿದ್ದಪ್ಪನೇ ಹೇಳಬೇಕು.