ಹುಬ್ಬಳ್ಳಿ:
ಈ ಕುರಿತು ಬೆಂಗಳೂರಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಗುರುವಾರ ಮನವಿ ಸಲ್ಲಿಸಿರುವ ಅವರು, ರಾಜ್ಯದಿಂದ ಯೋಜನೆ ಜಾರಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಭೂಪೇಂದ್ರ ಯಾದವ ಅವರು ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ರಾಜ್ಯಕ್ಕೆ ಹಿಂತಿರುಗಿಸಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಗೋವಾ ಒತ್ತಡಕ್ಕೆ ಮಣಿದು ಪ್ರಸ್ತಾವನೆಯನ್ನು ಹಿಂತಿರುಗಿಸಲಾಗಿದೆ. ಇದು ಖಂಡನೀಯ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕ ಹಾಗೂ ಗೋವಾ ಎರಡು ರಾಜ್ಯಗಳ ನಡುವಿನ ವಿವಾದ ಇತ್ಯರ್ಥಗೊಳಿಸಬೇಕಿದೆ. ಇಂತಹ ಸನ್ನಿವೇಶದಲ್ಲಿ ಈ ಯೋಜನೆ ಬಗ್ಗೆ ಕೇಂದ್ರ ಸಚಿವಾಲಯ ತೀರ್ಮಾನ ತೆಗೆದುಕೊಂಡರೆ ನ್ಯಾಯಿಕ ಮಧ್ಯಪ್ರವೇಶ (ಸಬ್‌ಜುಡೀಸ್) ಆಗುತ್ತದೆ. ಹೀಗಾಗಿ, ಅರಣ್ಯ ತಿರುವಳಿಯ ಪ್ರಸ್ತಾವವನ್ನು ರಾಜ್ಯಕ್ಕೆ ವಾಪಸ್ ಕಳುಹಿಸಿ ಸುಪ್ರೀಂಕೋರ್ಟ್ ನಿರ್ದೇಶನದ ಆಧಾರದಲ್ಲಿ ಪ್ರಸ್ತಾವವನ್ನು ಮರುಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ ಎಂದು ಕೋನರಡ್ಡಿ ಸಿಎಂಗೆ ಮನವರಿಕೆ ಮಾಡಿದ್ದಾರೆ.ಮಹದಾಯಿ ಯೋಜನೆಯ ಬಂಡೂರ ನಾಲಾ ತಿರುವು ಯೋಜನೆಗೆ ಪೈಪ್‌ಲೈನ್, ಪಂಪ್‌ಹೌಸ್, ವಿದ್ಯುತ್ ಮಾರ್ಗ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನೆರಸೆ, ಮಂತುರ್ಗ ಹಾಗೂ ಬಚೋಲಿ ಗ್ರಾಮಗಳ 71 ಎಕರೆ ಭೂಮಿಯನ್ನು ಬಳಕೆಗೆ ಅನುಮೋದನೆ ಕೋರಿ ಕರ್ನಾಟಕ ನೀರಾವರಿ ನಿಗಮವು ಕೇಂದ್ರಕ್ಕೆ 3 ವರ್ಷದ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಯೋಜನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸ್ವತಂತ್ರವಾಗಿದೆ. ಕೇಂದ್ರದ ವಿವಿಧ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದ ಬಳಿಕ ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನ ಮಾಡಲು ಅವಕಾಶ ಇದೆ. ಆದರೆ, ಗೋವಾ ಅರಣ್ಯ ಇಲಾಖೆಯ ಪಿಸಿಸಿಎಫ್ (ವನ್ಯಜೀವಿ) 2023ರಲ್ಲಿ ರಾಜ್ಯಕ್ಕೆ ನೋಟಿಸ್ ನೀಡಿದ್ದಾರೆ. ಕರ್ನಾಟಕದ ಗಡಿಯೊಳಗೆ ಈ ಯೋಜನೆ ಅನುಷ್ಠಾನವಾಗುತ್ತಿರುವುದರಿಂದ ನೋಟಿಸ್ ನೀಡುವ ಅಧಿಕಾರ ಗೋವಾಕ್ಕಿಲ್ಲ ಎಂದು ತಿಳಿಸಿದ್ದಾರೆ.
ಯೋಜನೆ ಜಾರಿಯಾಗದಂತೆ ಗೋವಾ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದು, ಆದಕಾರಣ ಕೇಂದ್ರದ ಮನವೋಲಿಸಲು ಕೇಂದ್ರ ಸಚಿವರು, ಸಂಸದರ, ಶಾಸಕರು ಸೇರಿದಂತೆ ಸರ್ವ ಪಕ್ಷದ ಸಭೆ ಕರೆದು ಪ್ರಧಾನಿಗಳ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.