ಕೊಟ್ಟೂರು: ಮಳೆ ಕೊರತೆಯಿಂದ ನಲುಗುತ್ತಿರುವ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಿಸುವ ಎಲ್ಲ ಸಾಧ್ಯತೆಗಳಿವೆ. ತಾಲೂಕಿನಾದ್ಯಂತ ಮೇವು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಎಲ್ಲ ಅಧಿಕಾರಿಗಳು ವಹಿಸಬೇಕು ಎಂದು ಶಾಸಕ ಕೆ. ನೇಮರಾಜನಾಯ್ಕ ಸೂಚಿಸಿದರು.
ಪಟ್ಟಣದ ತಾಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಗುರುವಾರ ನಡೆದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶೇ. ೬೦ರಷ್ಟು ಮಳೆ ಕೊರತೆಯಾಗಿದೆ. ಈಗಾಗಲೇ ರೈತರು ಸಾಕಷ್ಟು ನಲುಗಿದ್ದಾರೆ. ಯಾವುದೇ ಗ್ರಾಮದಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಕುರಿತು ಎಲ್ಲ ಪಿಡಿಒಗಳು ಮೊದಲೇ ಮಾಹಿತಿ ನೀಡಬೇಕು. ಬೋರ್, ಪೈಪ್‌ಲೈನ್ ಅವಶ್ಯಕತೆ ಮತ್ತು ವಿದ್ಯುತ್ ಸಮಸ್ಯೆ ಕುರಿತು ಸ್ಪಷ್ಟವಾಗಿ ತಿಳಿಸಬೇಕು. ಸದ್ಯಕ್ಕೆ ಮೇವಿನ ಕೊರತೆ ಇಲ್ಲವಾದರೂ ಮುಂದಿನ ದಿನಗಳಲ್ಲಿ ಅದರನ್ನು ನಿಭಾಯಿಸಲು ಕ್ರಮ ತೆಗೆದುಕೊಳ್ಳಬೇಕು. ಕೆಲವು ಹಳ್ಳಿಗಳಲ್ಲಿ ಇರುವ ನೀರಿನ ಸಮಸ್ಯೆಗೆ ಪೂರಕವಾಗಿ ಬಾಡಿಗೆ ಬೋರ್‌ವೆಲ್ ಪಡೆಯಲು ಈಗಲೇ ತಯಾರಿ ಮಾಡಿಕೊಳ್ಳಿ ಎಂದು ಹೇಳಿದರು.ಬರ ನಿರ್ವಹಣೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ನಿರ್ಲಕ್ಷ್ಯ ತೋರಿದರೆ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗೆ ತಿಳಿಸಲಾಗುವುದು. ಪಿಡಿಒಗಳು ತಮ್ಮ ಗ್ರಾಪಂ ಕೇಂದ್ರದಲ್ಲಿದ್ದು ಎಲ್ಲವನ್ನೂ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸಹಾಯ ಮಾಡಬೇಕು. ಮಳೆ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿರುವ ಅನೇಕ ರೈತರು ನಷ್ಟದಲ್ಲಿದ್ದಾರೆ. ಅಂತಹ ರೈತರ ಸಹಾಯಕ್ಕೆ ಅಧಿಕಾರಿಗಳು ಮುಂದಾಗಬೇಕು. ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ರೈತರಿಗೆ ಯಾವ ಪ್ರಯೋಜಗಳಿವೆ ಎಂಬುದನ್ನು ಪ್ರಚುರಪಡಿಸಿ ಅದನ್ನು ಅವರು ಸದುಪಯೋಗಪಡಿಸಿಕೊಳ್ಳಲು ತಿಳಿಸಬೇಕು. ಕುಡಿಯುವ ನೀರಿನ ಯೋಜನೆಯ ಬೋರ್‌ವೆಲ್‌ಗಳಿಗೆ ಕೆಲವೆಡೆ ವಿದ್ಯುತ್ ಸಂಪರ್ಕ ತೆಗೆದಿರುವುದು ಸಭೆ ಮೂಲಕ ಗಮನಕ್ಕೆ ಬಂದಾಗ, ಕುಡಿಯುವ ನೀರಿಗೆ ತೊಂದರೆ ಮಾಡಬಾರದು. ಕೂಡಲೇ ಸಂಪರ್ಕಗಳನ್ನು ಕಲ್ಪಿಸಿಕೊಡಿ ಎಂದು ಜೆಸ್ಕಾಂ ಎಇಇ ನಾಗರಾಜ ಅವರಿಗೆ ಶಾಸಕರು ಸೂಚಿಸಿದರು.ಕೊಟ್ಟೂರು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಗೋಳ ಜಾಕ್‌ವೆಲ್‌ನಲ್ಲಿ ವಿದ್ಯುತ್ ಕಡಿತದಿಂದ ಸಮರ್ಪಕ ನೀರು ಕೊಡಲಾಗುತ್ತಿಲ್ಲ. ಪಟ್ಟಣದಲ್ಲಿರುವ ೧೩ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ನಾಲ್ಕು ಮಾತ್ರ ಸಮರ್ಪಕವಾಗಿವೆ. ಉಳಿದ ಘಟಕಗಳನ್ನು ಗುತ್ತಿಗೆದಾರರ ನಿರ್ವಹಣೆ ಇಲ್ಲದೇ ಮುಚ್ಚಿವೆ. ಸ್ಥಳೀಯ ಆಡಳಿತದಿಂದ ನಿರ್ವಹಣೆ ಅಸಾಧ್ಯವಾಗಿರುವುದರಿಂದ ಶೀಘ್ರದಲ್ಲಿ ಟೆಂಡರ್ ಮೂಲಕ ನಿರ್ವಹಣೆಗೆ ಗುತ್ತಿಗೆ ನೀಡುತ್ತೇವೆ ಎಂದು ಪಪಂ ಮುಖ್ಯಾಧಿಕಾರಿ ಎ. ನಸರುಲ್ಲಾ ತಿಳಿಸಿದರು.
ತಾಲೂಕಿನ ಹ್ಯಾಳ್ಯಾ ಸೇರಿ ಕೆಲವು ಪಂಚಾಯಿತಿ ವ್ಯಾಪ್ತಿಯ ಬೋರ್‌ವೆಲ್ ಹಾಕಿಸಲು ಯೋಜನೆ ರೂಪಿಸಿದೆ. ಬೋರ್ ಹಾಕಿರುವ ಕಡೆ ಪೈಪ್‌ಲೈನ್ ಮಾಡಲು ಸೂಚಿಸಿದೆ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದರು.
ಕೃಷಿ, ರೇಷ್ಮೆ , ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ ಬಿತ್ತನೆಯ ಗುರಿ, ಸಾಧನೆ ಮತ್ತು ಮಳೆ ಕೊರತೆಯಿಂದ ಬೆಳೆಗಳ ಸ್ಥಿತಿ ಕುರಿತು ಸಭೆಗೆ ತಿಳಿಸಿದರು.
ತಹಸೀಲ್ದಾರ್ ಜಿ.ಕೆ. ಅಮರೇಶ, ತಾಪಂ ಇಒ ಡಾ. ಬಿ. ಆನಂದಕುಮಾರ, ಪಿಡಿಒಗಳು, ಗ್ರಾಮ ಲೆಕ್ಕಾಧಿಕಾರಿಗಳು ಪಾಲ್ಗೊಂಡಿದ್ದರು.