ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ವಂತ ಪರಿಶ್ರಮದಿಂದ ತೊಡಗಿಸಿಕೊಳ್ಳಬೇಕು.
- ಹಿರಿಯ ರಂಗ ನಿರ್ದೇಶಕಿ ಕೆ.ಆರ್. ಸುಮತಿ ಅಭಿಮತ
ಕನ್ನಡಪ್ರಭ ವಾರ್ತೆ ಮೈಸೂರು
ಕಲೆ ಸೋತು ಗೆಲ್ಲುವುದರ ಜೊತೆಗೆ, ತಾಳ್ಮೆ ಹಾಗೂ ಮಾನವೀಯತೆಯನ್ನು ಕಲಿಸುತ್ತದೆ ಎಂದು ಕಲಾವಿದರು, ಹಿರಿಯ ರಂಗ ನಿರ್ದೇಶಕಿ ಕೆ.ಆರ್. ಸುಮತಿ ಹೇಳಿದರು.
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ವೇದಿಕೆ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ
ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಅಭಿನಂದಿಸಿ, ಪ್ರಮಾಣ ಪತ್ರ, ನೆನಪಿನ ಕಾಣಿಕೆ ಹಾಗೂ ಅಂತಿಮ ಬಿ.ಎ. ವಿದ್ಯಾರ್ಥಿನಿ ನಿಹಾರಿಕಾ ಹೆಗಡೆ ಅವರಿಗೆ ಸಮಗ್ರ ಪಾರಿತೋಷಕ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಸ್ವಂತ ಪರಿಶ್ರಮದಿಂದ ತೊಡಗಿಸಿಕೊಳ್ಳಬೇಕು. ಕಲೆ ಸೋತು ಗೆಲ್ಲುವುದನ್ನು ಕಲಿಸುತ್ತದೆ. ಇಂದು ಬಹುತೇಕ ಯುವಜನಾಂಗ ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ಕಾರಣ ಇಂದಿನ ಯುವ ಜನಾಂಗಕ್ಕೆ ಸಹಿಸುವ ಸಾಮರ್ಥ್ಯ ಕಡಿಮೆ ಇದೆ. ಹಾಗಾಗಿ ವಿದ್ಯಾರ್ಥಿಗಳು ನಾನಾ ರೀತಿಯ ಒತ್ತಡಗಳಿಗೆ ಒಳಗಾಗುತ್ತಾರೆ. ಪ್ರತಿಭಾ ವೇದಿಕೆ ಇಂತಹ ಒತ್ತಡಗಳನ್ನು ಸಹಿಸಿಕೊಳ್ಳುವ, ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ ಮನುಷ್ಯ ಸಂಘಜೀವಿ ಹಾಗಾಗಿ ವಿದ್ಯಾರ್ಥಿಗಳು ಗುಂಪಿನಲ್ಲಿ ಭಾಗವಹಿಸುವುದು ಅವರ ವ್ಯಕ್ತಿತ್ವ ವಿಕಸನದ ಬೆಳವಣಿಗೆ ದೃಷ್ಟಿಯಿಂದ ತುಂಬಾ ಮಹತ್ವದಾಗಿದೆ ಎಂದರು.
ನಾಟಕದಲ್ಲಿ ಸೋತವನ ನೋವಿನ ಅನುಭವ, ಗೆದ್ದವನ ಸಂಭ್ರಮವು ಇರುತ್ತದೆ. ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳು ವ್ಯಕ್ತಿಯಲ್ಲಿರುವ ಮಾನವೀಯತೆಯನ್ನು ಹೆಚ್ಚಿಸುತ್ತವೆ. ಸೋತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮನಸ್ಥಿತಿಯನ್ನು ಅಧ್ಯಾಪಕರು ಹೊಂದಬೇಕು. ಸೋತ ವಿದ್ಯಾರ್ಥಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಆಸಕ್ತಿ ಹಾಗೂ ಛಲದಿಂದ ಮುಂದುವರೆದರೆ ಆಗ ಇಂದಿನ ಸೋಲೆ ಮುಂದಿನ ಗೆಲುವಿಗೆ ಮೆಟ್ಟಿಲಾಗುತ್ತದೆ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಹೋರಾಟದ ಮನೋಭಾವವನ್ನು ಬೆಳಸಿಕೊಂಡರೆ ಏನನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು. 30ಕ್ಕೂ ಹೆಚ್ಚು ಪ್ರತಿಭಾನ್ವೇಷಣಾ ಸ್ಪರ್ಧೆಗಳಲ್ಲಿ, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ 120 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗಿದೆ ಎಂದರು.
ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮೀ ಮುರಳೀಧರ್ ಅಧ್ಯಕ್ಷತೆ ವಹಿಸಿದ್ದರು. ಸಿಇಒ ಹಾಗೂ ಶೈಕ್ಷಣಿಕ ಸಲಹೆಗಾರ ಡಾ. ಎಸ್.ಆರ್. ರಮೇಶ್, ಪ್ರತಿಭಾ ವೇದಿಕೆಯ ಸಂಚಾಲಕ ಎಂ. ನಾಗೇಶ, ಸಹ ಸಂಚಾಲಕಿ ಎನ್.ಸಿ. ಹಂಸವೇಣಿ ಇದ್ದರು.
ಪ್ರತಿಭಾ ವೇದಿಕೆಯ ಸಂಚಾಲ ಎಂ. ನಾಗೇಶ ಸ್ವಾಗತಿಸಿದರು. ಅಂತಿಮ ಬಿ.ಎಸ್ಸಿ ವಿದ್ಯಾರ್ಥಿ ಅಕ್ಷೋಭ್ಯಭಟ್ ಪ್ರಾರ್ಥಿಸಿದರು. ವಿಜೇತ ವಿದ್ಯಾರ್ಥಿಗಳ ಪಟ್ಟಿಯನ್ನು ದ್ವಿತೀಯ ಬಿಬಿಎ ವಿದ್ಯಾರ್ಥಿ ಪಂಚಮ್ ಓದಿದರು. ವಿದ್ಯಾರ್ಥಿಗಳ ಅನಿಸಿಕೆಯನ್ನು ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ನಿಹಾರಿಕ ಹೆಗಡೆ ಮತ್ತು ಅಂತಿಮ ಬಿಸಿಎ ವಿದ್ಯಾರ್ಥಿ ಸುಮಂತ್ ಹಂಚಿಕೊಂಡರು. ಪ್ರಥಮ ಬಿ.ಎ. ವಿದ್ಯಾರ್ಥಿ ಸೃಜನ್ ನಿರೂಪಿಸಿದರು. ಪ್ರತಿಭಾ ವೇದಿಕೆಯ ಸಹ ಸಂಚಾಲಕಿ ಎನ್.ಸಿ. ಹಂಸವೇಣಿ ವಂದಿಸಿದರು. ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.