ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನ ಈ ಅವ್ಯವಹಾರದಲ್ಲಿ 14 ಆರೋಪಿಗಳ ಪೈಕಿ ಐವರು ಬ್ಯಾಂಕ್ ಸಿಬ್ಬಂದಿಯೇ ಆಗಿದ್ದಾರೆ. ಅದರಲ್ಲಿ ಸಾಗರ ಹನಮಂತ ಸಬಕಾಳೆ ಮುಖ್ಯ ಆರೋಪಿಯಾಗಿದ್ದಾನೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 14 ಜನರು ಭಾಗಿಯಾಗಿದ್ದಾರೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಅವ್ಯವಹಾರದಲ್ಲಿ ಸಾಗರ ಸಬಕಾಳೆ ಎ1 ಆರೋಪಿಯಾಗಿದ್ದು, ಈತನ ಆಸ್ತಿ ಮೌಲ್ಯ ₹ 6. 97 ಕೋಟಿಯಾಗಿದೆ. ಇದನ್ನು ಠೇವಣಿಯಿಟ್ಟು ಬೇರೆ ಬೇರೆಯವರ ಹೆಸರಿನಲ್ಲಿ ₹81 ಕೋಟಿ ಸಾಲ ಪಡೆದಿದ್ದಾನೆ. ಮಹಾಲಕ್ಷ್ಮೀ ಬ್ಯಾಂಕಿನ ವಹಿವಾಟು ನಾಲ್ಕು ಬಾರಿ ಆಡಿಟ್ ಆಗಿದೆ. ಆದರೂ ಈ ಅವ್ಯವಹಾರದ ಬಗ್ಗೆ ಸಣ್ಣ ಅಂಶವನ್ನೂ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಯೂ ಸೇರಿ ಒಟ್ಟು 14 ಆರೋಪಿಗಳ ಸುಮಾರು 112 ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಈ ಆಸ್ತಿಯ ಒಟ್ಟು ಸರ್ಕಾರಿ ಮೌಲ್ಯ ₹13.17 ಕೋಟಿ ಆಗಿದೆ. ಮಾರುಕಟ್ಟೆ ಮೌಲ್ಯ ₹50 ಕೋಟಿಗಳಷ್ಟಿದೆ ಎಂದು ಹೇಳಿದರು.2021ರಿಂದ 2024ರವರೆಗೆ 11 ಆರೋಪಿಗಳು ಈ ಬ್ಯಾಂಕಿನಲ್ಲಿ ₹6 ಕೋಟಿ ಠೇವಣಿಯಿಟ್ಟು, ಬೇರೆ ಬೇರೆಯವರ ಹೆಸರಿನಲ್ಲಿ ₹81 ಕೋಟಿ ಸಾಲ ಪಡೆದಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ 7 ತಂಡ ರಚಿಸಲಾಗಿದೆ. ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುವುದು. ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕರಿಗೆ ಠೇವಣಿ ಹಣ ಮರಳಿಸಲು ನಿರ್ಧರಿಸಿದೆ ಎಂದು ಹೇಳಿದರು.