ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮಹಾಲಕ್ಷ್ಮೀ ಕಲ್ಯಾಣ ನಾಯಕಿ ಅಮ್ಮನವರಿಗೆ ವಿಶೇಷ ಅಲಂಕಾರ, ಸೇವಾರ್ಥಗಳು ನಡೆದವು. ಇಡೀ ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಮೈನಡುಗಿಸುವ ಚಳಿ, ಜಡಿಮಳೆಯ ನಡುವೆಯೂ ಧಾರ್ಮಿಕ ಕೈಂಕರ್ಯಗಳು ಶ್ರದ್ಧಾ- ಭಕ್ತಿಯಿಂದ ನೆರವೇರಿದವು.
ತಿರುವಾಡಿಪ್ಪುರಂ ಭಾರತದ ಎಲ್ಲಾ ವೈಷ್ಣವ ದೇವಾಲಯಗಳಲ್ಲಿ ಆಚರಿಸಲ್ಪಡುತ್ತಿದ್ದು, ಮೇಲುಕೋಟೆಯಲ್ಲಿ ತಿರುವಾಡಿಪ್ಪುರಂ ‘ಅಮ್ಮನವರ ವರ್ಧಂತಿ’ಯಾಗಿ ವೈಭವದಿಂದ ನೆರವೇರುತ್ತಾ ಬಂದಿದೆ. ಸ್ಥಾನೀಕರಾದ ಕೋವಿಲ್‌ನಂಬಿ ಮುಕುಂದನ್ ಹಾಗೂ ಪ್ರಸನ್ನಕುಮಾರ್ ಮಹೋತ್ಸವದ ಯಶಸ್ಸಿಗೆ ವಿಶೇಷವಾಗಿ ಶ್ರಮಿಸುವ ಮೂಲಕ ಅನೂಚಾನ ಪರಂಪರೆಯಂತೆ ತಿರುವಾಡಿಪ್ಪುರಂ ಮಹೋತ್ಸವವನ್ನು ಈ ವರ್ಷವೂ ಮೇಲುಕೋಟೆ ದೇವಾಲಯದಲ್ಲಿ ವೈಭವದ ಆಚರಣೆಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಮಹೋತ್ಸವದ ಅಂಗವಾಗಿ ಕಲ್ಯಾಣನಾಯಕಿ ಅಮ್ಮನವರಿಗೆ ಬೆಳಗ್ಗೆ 8 ಗಂಟೆ ವೇಳೆಗೆ ಬೆಳ್ಳಿಯ ದೊಡ್ಡ ಆದಿಶೇಷ ವಾಹನೋತ್ಸವ, ದಿವ್ಯ ಪ್ರಬಂಧಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ನೆರವೇರಿತು. ನಂತರ ದ್ವಾದಶಾರಾಧನೆಯೊಂದಿಗೆ ಅಭಿಷೇಕ , ಮಹಾಮಂಗಳಾರತಿ ನೆರವೇರಿಸಲಾಯಿತು.
ವರ್ಧಂತಿ ಮಹೋತ್ಸವದ ಅಂಗವಾಗಿ ಅಮ್ಮನವರ ಸನ್ನಿಧಿಯ ಆವರಣವನ್ನು ತಳಿರು ತೋರಣಗಳಿಂದ ಆಕರ್ಷಕವಾಗಿ ಸಿಂಗಾರ ಮಾಡಲಾಗಿತ್ತು. ದೇಗುಲದ ಇಒ ಶೀಲಾ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.