ಕನ್ನಡಪ್ರಭ ವಾರ್ತೆ ಮದ್ದೂರು
ಯೋಗ, ಭಜನೆ, ಧ್ಯಾನದಿಂದ ಮಾತ್ರ ಮನುಷ್ಯನ ಮನಃ ಪರಿವರ್ತನೆ ಸಾಧ್ಯ ಎಂದು ಅರೆತಿಪ್ಪೂರು ಜೈನ ಮಠದ ಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಪಟ್ಟಣದ ಜಯಲಕ್ಷ್ಮೀ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಮಂಡ್ಯ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ನಡೆದ 1956ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯ ಮದ್ಯವ್ಯಸನಕ್ಕೆ ಬಲಿಯಾದರೆ ಮಾಡಿದ ಸಂಪಾದನೆಯಲ್ಲಿ ಉಳಿತಾಯ ಕಷ್ಟವಾಗಲಿದೆ. ದುಶ್ಚಟಗಳಿಂದ ದೂರ ಉಳಿದರೆ ತನ್ನ ಕುಟುಂಬ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಬಹುದು ಎಂದರು.ಜಿಲ್ಲಾ ನಿರ್ದೇಶಕ ಎಂ.ಚೇತನ ಮಾತನಾಡಿ, ಶ್ರೀ ಕ್ಷೇತ್ರ ಯೋಜನೆ ಮೂಲಕ ಹೆಗ್ಗಡೆಯವರು ಕೈಗೊಂಡ ಸಾವಿರಾರು ಕಾರ್ಯಕ್ರಮಗಳಲ್ಲಿ ಮದ್ಯವರ್ಜನ ಶಿಬಿರವೂ ಒಂದು. ಅಮಲಿನ ಸುಳಿತಕ್ಕೆ ಸಿಲುಕಿ ಕುಟುಂಬ, ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಈ ಕಾರ್ಯಕ್ರಮವು ದುಶ್ಚಟಕ್ಕೊಳಗಾದ ವ್ಯಕ್ತಿಯ ಮನಃ ಪರಿವರ್ತನೆ ಮಾಡಿ ನವಜೀವನ ಕಟ್ಟಿಕೊಡುವುದಾಗಿದೆ. ಎಲ್ಲಾ ಶಿಬಿರಾರ್ಥಿಗಳು ಕುಟುಂಬದ ಉತ್ತಮ ಸದಸ್ಯನಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಲಿಂಗೇಗೌಡ, ಗುರುಸ್ವಾಮಿ, ನೈದಿಲೆ ಚಂದ್ರು, ನ.ಲಿ.ಕೃಷ್ಣ, ಮುಖಂಡರಾದ ಡಾ.ಲೋಕೇಶ್ ಮತ್ತು ಡಾ.ತಾರಕೇಶ್ವರಿ, ಕಲ್ಯಾಣ ಮಂಟಪ ಮಾಲೀಕ ನಂಜಪ್ಪ, ಜನಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಮುಖೇಶ್, ತಾಲೂಕಿನ ಯೋಜನಾಧಿಕಾರಿ ಹಾಲಪ್ಪ, ಮೇಲ್ವಿಚಾರಕ ಮಂಜುನಾಥ, ಶಿಬಿರಾಧಿಕಾರಿ ರಮೇಶ್, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಮಂಜುನಾಥ್, ಸಚಿನ್, ಕೋಶಾಧಿಕಾರಿ ದಯಾನಂದ ಸೇರಿ ಸಂಘ- ಸಂಸ್ಥೆಗಳ ಪ್ರಮುಖರು, ಊರಿನ ಗಣ್ಯರು, ಯೋಜನೆಯ ಕಾರ್ಯಕರ್ತರು, ಸೇವಾ ಪ್ರತಿನಿಧಿಗಳು, ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.