ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಹಳೇ ಎಂ.ಸಿ.ರಸ್ತೆಯ ತಮಿಳು ಕಾಲೋನಿ ನಿವಾಸಿಗಳಿಗೆ ಶೀಘ್ರದಲ್ಲೇ ನಿವೇಶನ ಒದಗಿಸುವುದಾಗಿ ಶಾಸಕ ಕೆ.ಎಂ.ಉದಯ್ ಮಂಗಳವಾರ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ತಮಿಳು ಕಾಲೋನಿಯ 106 ಮಂದಿ ನಿವೇಶನದ ಅರ್ಹ ಫಲಾನುಭವಿಗಳಿಗೆ ಪರಿಚಯ ಪತ್ರ ವಿತರಣೆ ಮಾಡಿ ಮಾತನಾಡಿದರು.
ತಾಲೂಕಿನ ಗೆಜ್ಜಲಗೆರೆ ಸಮೀಪದ ಕುದರಗುಂಡಿ ವ್ಯಾಪ್ತಿಯ ಸರ್ವೇ ನಂಬರ್ 245 ರಲ್ಲಿ ಜಿಲ್ಲಾಡಳಿತದಿಂದ 3 ಎಕರೆ ವಿಸ್ತೀರ್ಣದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿವೇಶನ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದಿನ ಎರಡು- ಮೂರು ತಿಂಗಳಲ್ಲಿ ಎಲ್ಲಾ 106 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಮನ್ಮುಲ್ ನಿರ್ದೇಶಕ ಹರೀಶ್, ಉಪ ತಹಸೀಲ್ದಾರ್ ಸೋಮಶೇಖರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ಚಂದ್ರಪ್ಪ ಹಾಗೂ ಸಿಬ್ಬಂದಿ ಇದ್ದರು.
--------ಜನರ ಸೇವೆಯೇ ನನ್ನ ಧ್ಯೇಯ: ಉದಯ್
ಮದ್ದೂರು: ಸಚಿವ ಸ್ಥಾನ ಅಥವಾ ನಿಗಮ, ಮಂಡಳಿಗೆ ಆಕಾಂಕ್ಷಿ ನಾನಲ್ಲ. ಕ್ಷೇತ್ರದ ಜನರ ಸೇವೆಯೇ ನನ್ನ ಧ್ಯೇಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಂಕೀರ್ಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಸಚಿವ ಸ್ಥಾನ ಮತ್ತು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೆಲ ಶಾಸಕರು ಲಾಭಿ ನಡೆಸುತ್ತಿರುವುದು ನಿಜ. ಆದರೆ, ನಾನಂತೂ ಈ ಎರಡು ಸ್ಥಾನಗಳ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಹಾಗೂ ನಿಗಮ, ಮಂಡಳಿಗಳಿಗೆ ಆಯ್ಕೆಯಾದರೇ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ಸಾಕಾಗುವುದಿಲ್ಲ. ಹೀಗಾಗಿ ಸಚಿವ ಅಥವಾ ನಿಗಮ, ಮಂಡಳಿ ಸ್ಥಾನದ ಆಕಾಂಕ್ಷಿಯಲ್ಲ ಎಂದರು.