ಹೊಸಪೇಟೆ: ಮಹಾಕಾವ್ಯ ರಾಮಾಯಣದ ಮೂಲಕ ಜೀವನದ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಮಹಾಕವಿ ಶ್ರೀ ಮಹರ್ಷಿ ವಾಲ್ಮೀಕಿ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ವಾಲ್ಮೀಕಿ ಸಮುದಾಯಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗವನ್ನು ಸಮುದಾಯದವರು ಸದ್ಬಳಸಿಕೊಳ್ಳಬೇಕು. ನಾನು ಸಹ ಮುಖ್ಯಮಂತ್ರಿಗಳಿಗೆ ಮುಂದಿನ ದಿನದಲ್ಲಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಸಿ.ಬಿ. ಚಿಲ್ಕರಾಗಿ ಉಪನ್ಯಾಸ ನೀಡಿ, ರಾಮಾಯಣ ಕಾವ್ಯದ ಮೂಲಕ ಅವರು ನೀಡಿರುವ ಆದರ್ಶ ಮೌಲ್ಯಗಳನ್ನು ಯುವಪೀಳಿಗೆ ತಿಳಿಯಬೇಕಿದೆ. ವಾಲ್ಮೀಕಿಯವರು ನೂರಾರು ಪಾತ್ರಗಳನ್ನು ಒಂದೇ ಕಾವ್ಯದಲ್ಲಿ ಸೃಷ್ಟಿಸಿ, ಆ ಪಾತ್ರಗಳ ಮೂಲಕ ಮಾನವೀಯತೆ, ಸಮಾನತೆ, ಮಮತೆ, ಭಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ ಮತ್ತು ರಾಜನೀತಿ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದರು.ವಿಜಯನಗರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೈಭವ, ನವೀನ ಎಂ.ಬಿ. ಅವರಿಗೆ ಬಾಲ ಯೋಜನೆಯಡಿ ತಲಾ ₹1 ಲಕ್ಷ ಪ್ರೋತ್ಸಾಹಧನ ನೀಡಲಾಯಿತು.
ದೇವದಾಸಿ ಮಕ್ಕಳ ವಿವಾಹ ಯೋಜನೆಯಡಿ ಮೂರು ದಂಪತಿಗೆ ತಲಾ ₹5 ಲಕ್ಷ ಮೊತ್ತದ ದೇವದಾಸಿ ಮಕ್ಕಳ ವಿವಾಹ ಪ್ರೋತ್ಸಾಹ ಧನ ಬಾಂಡ್ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಅಲಿ ಅಕ್ರಮ್ ಷಾ, ಎಸ್ಪಿ ಎಸ್. ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ, ಅರಣ್ಯ ಇಲಾಖೆ ಜಿಲ್ಲಾ ಅಧಿಕಾರಿ ಅನುಪಮ, ಡಿವೈಎಸ್ಪಿ ಡಾ. ಟಿ. ಮಂಜುನಾಥ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರವಿಕುಮಾರ ಜೆ, ಸಹಾಯಕ ಆಯುಕ್ತರ ಪಿ. ವಿವೇಕಾನಂದ, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ. ಜಂಬಯ್ಯ, ತಹಸೀಲ್ದಾರ ಶೃತಿ, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.