ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉನ್ನತ ಸಂಶೋಧನೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಾವಿನ್ಯತೆ ಮತ್ತು ಉತ್ಕೃಷ್ಟತೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದಕ್ಕಾಗಿ ಮುಂಬೈಯ ಡ್ಯೂರ್ ಟೆಕ್ನಾಲಜೀಸ್ ಪ್ರೈ.ಲಿ. ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.ಈ ಸಂದರ್ಭ ಮಾಹೆ ಉಪಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಮಾತನಾಡಿ, ಶೈಕ್ಷಣಿಕ ಮತ್ತು ಆರೋಗ್ಯ ರಕ್ಷಣೆಯ ಆವಿಷ್ಕಾರಗಳನ್ನು ಮುಂದುವರಿಸುವಲ್ಲಿ ಇಂತಹ ಒಪ್ಪಂದಗಳು ಅಗತ್ಯ. ಈ ಪಾಲುದಾರಿಕೆಯು ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಯಲ್ಲಿ ತರುವ ಪ್ರಗತಿಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.ಡ್ಯೂರ್ ಟೆಕ್ನಾಲಜೀಸ್ ಸಂಸ್ಥಾಪಕ, ಸಿಇಒ ವಿಪಿನ್ ಯಾದವ್ ಮಾತನಾಡಿ, ಆರೋಗ್ಯ ಕ್ಷೇತ್ರದ ಪರಿವರ್ತನೆಯಲ್ಲಿ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂದಿನ ಆರೋಗ್ಯ ರಕ್ಷಣೆಯ ಕೆಲವು ಸವಾಲುಗಳನ್ನು ಪರಿಹರಿಸಲು ನಾವೀನ್ಯತೆ ಮುಖ್ಯ ಎಂಬುದನ್ನು ನಾವು ಡ್ಯೂರ್ ಟೆಕ್ನಾಲಜೀಸ್‌ನಲ್ಲಿ ನಂಬಿದ್ದೇವೆ. ಮಾಹೆಯೊಂದಿಗೆ ನಮ್ಮ ಪಾಲುದಾರಿಕೆ ಭವಿಷ್ಯದಲ್ಲಿ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಲು ಅತ್ಯುತ್ತಮವಾದ ಶೈಕ್ಷಣಿಕ ಸಂಶೋಧನೆ ಮತ್ತು ತಾಂತ್ರಿಕ ಪರಿಣತಿಯನ್ನು ಒಟ್ಟುಗೂಡಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಈ ಕುರಿತ ಕಾರ್‍ಯಕ್ರಮದಲ್ಲಿ ಮಾಹೆಯ ಕಾರ್ಪೊರೆಟ್ ರಿಲೇಶನ್ ನಿರ್ದೇಶಕ ಡಾ.ಹರೀಶ್ ಕುಮಾರ್ ಒಪ್ಪಂದದ ಕುರಿತ ಮಾಹಿತಿ ನೀಡಿದರು.ಮಾಹೆಯ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಡಾ. ರವಿರಾಜ ಎನ್. ಸೀತಾರಾಮ್, ಕುಲಸಚಿವ ಡಾ. ಗಿರಿಧರ್ ಪಿ. ಕಿಣಿ, ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ. ಚೆರಿಯನ್ ವರ್ಗೀಸ್ ವಿ., ಮಾಹೆಯ ಐಟಿ ಮತ್ತು ಡಿಜಿಟಲ್ ರೂಪಾಂತರ ನಿರ್ದೇಶಕ ಡಾ. ಗಣೇಶ್ ಪ್ರಸಾದ್ ಪಡುಬಿದ್ರಿ, ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ನಿರ್ದೇಶಕ ಭರತ್ ಕುಮಾರ್, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಹಪ್ರಾಧ್ಯಾಪಕ ಡಾ. ಬ್ರ್ಯಾಲ್ ಕ್ಯಾರಿ ಡಿಸೋಜಾ ಮತ್ತು ಟೆಕ್ನೋರ್ ಮಣಿಪಾಲ್ ಪ್ರೈ.ಲಿ.ನ ಭುವನೇಶ್ವರನ್ ಉಪಸ್ಥಿತರಿದ್ದರು.