ಚಂದ್ರು ಕೊಂಚಿಗೇರಿ
ಡಾ.ನಂಜುಂಡಪ್ಪ ವರದಿ ಅನ್ವಯ ಶಿಕ್ಷಣ, ಆರೋಗ್ಯ, ಕೃಷಿ, ಸಾಮಾಜಿಕ, ಆರ್ಥಿಕ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ, ತೀರಾ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಹೊಂದಿದೆ.
ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ಜಾತ್ರೆಯೆಂಬ ಹೆಗ್ಗಳಿಕೆ ಇರುವ ಮೈಲಾರಲಿಂಗೇಶ್ವರ ಜಾತ್ರೆಗೆ, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಬರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಅಭಿವೃದ್ಧಿ ಕಂಡಿಲ್ಲ. 2017ರ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮೈಲಾರ-ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ, ಅಂದು ₹5 ಕೋಟಿ ಮೀಸಲಿಟ್ಟರು. ಆದರೆ ಈ ಕುರಿತು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಸರ್ಕಾರ ಕಾನೂನು ಹೋರಾಟ ಮಾಡಿ, ಈ ಬಾರಿ ಬಜೆಟ್‌ನಲ್ಲಿ ಮತ್ತೆ ಮೈಲಾರ-ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನ್ನಣೆ ಸಿಗಬೇಕೆಂಬ ನಿರೀಕ್ಷೆಯಲ್ಲಿ ಭಕ್ತರಿದ್ದಾರೆ.ತಾಲೂಕಿನ ಮಾಗಳ-ಕಲ್ಲಾಗನೂರು ಮಧ್ಯೆ ಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ನೀರಾವರಿ ಬೋರ್ಡ್‌ಗೆ ₹35 ಕೋಟಿ ಅನುದಾನ ನೀಡುವಂತೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರ ನೀರಾವರಿ ನಿಗಮದ ಮೂಲಕ ಅಗತ್ಯ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ತಾಲೂಕಿನ ಹುಲಿಗುಡ್ಡದ ಬಳಿ 100 ಎಕರೆ ಸರ್ಕಾರಿ ಭೂಮಿ ಈಗಾಗಲೇ, ಪೊಲೀಸ್ ತರಬೇತಿ ಶಾಲೆ ಸ್ಥಾಪನೆಗಾಗಿಯೇ ಮೀಸಲು ಇಡಲಾಗಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಎಂ.ಪಿ. ಪ್ರಕಾಶರು ಸಶಸ್ತ್ರ ಮೀಸಲು ಪೊಲೀಸ್ ತರಬೇತಿ ಕೇಂದ್ರ ಮಂಜೂರು ಮಾಡಿಸಿದ್ದರು. ಆದರೆ ಬದಲಾದ ರಾಜಕೀಯ ವ್ಯವಸ್ಥೆಯಿಂದ ಬಳ್ಳಾರಿಯ ಹಗರಿ ಬಳಿಗೆ ಸ್ಥಳಾಂತರವಾಗಿತ್ತು. ಅಲ್ಲಿಯೂ ಸೂಕ್ತ ಜಾಗ ಇಲ್ಲದೇ ಮತ್ತೆ ಹೂವಿನಹಡಗಲಿಗೆ ಬಂತು. ಈಗಾಗಲೇ ಪೊಲೀಸ್ ಇಲಾಖೆ ಈ ಕುರಿತು ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೆ ಅಗತ್ಯ ಅನುದಾನ ನೀಡಬೇಕೆಂಬ ಜನರ ಒತ್ತಾಸೆ ಈ ಬಾರಿ ಈಡೇರುವ ನಿರೀಕ್ಷೆಯಲ್ಲಿದ್ದಾರೆ.