ಕೊಪ್ಪಳ: ಮನೆಯ ಸುತ್ತ ಹಾಗೂ ಹೊಲಗಳಲ್ಲಿ ಅನವಶ್ಯಕ ಕಸ ಬೆಳೆಯದಂತೆ, ಇಲಿ ಮತ್ತು ಹೆಗ್ಗಣಗಳಂತಹ ಹಾವಿನ ಆಹಾರವಾಗಬಲ್ಲ ಜೀವಿಗಳ ಓಡಾಟವಿಲ್ಲದಂತೆ ಎಚ್ಚರ ವಹಿಸುವುದರಿಂದ ಹಾವುಗಳ ಸಂಚಾರ ಹಾಗೂ ಕಡಿತದಿಂದ ಪಾರಾಗಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.
ನಾಗರಹಾವು ಬಿಟ್ಟು ಉಳಿದ 3 ವಿಷಕಾರಿ ಹಾವುಗಳು ರಾತ್ರಿವೇಳೆ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಹಾಗಾಗಿ ರಾತ್ರಿವೇಳೆ ಹೊರಗಡೆ ಹೋಗುವಾಗ ಟಾರ್ಚ್ ಬಳಸಬೇಕು. ಮನೆ ಅಂಗಳವನ್ನು ಇಲಿ ಹೆಗ್ಗಣಗಳಂತಹ ಹಾವುಗಳು ತಿನ್ನುವ ಜೀವಿಗಳಿಂದ ಮುಕ್ತವಾಗಿಡಬೇಕು. ಹಾವುಗಳಿರುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವಾಗ ಶೂ ಬಳಸಬೇಕು ಎಂದು ತಿಳಿಸಿದರು.
ರೈತರು ಹೊಲದಲ್ಲಿ ದನ-ಕರಗಳಿಗೆ ಮೇವು ಹಾಗೂ ಹಸಿಹುಲ್ಲು ಕೀಳುವಾಗ ಕುಡುಗೋಲು ಬಳಸಬೇಕು. ಒಂದು ವೇಳೆ ಹಾವು ಕಚ್ಚಿದರೆ ಸರ್ಕಾರಿ ಆಸ್ಪತ್ರೆಗೆ 40 ನಿಮಿಷದೊಳಗಾಗಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ರಕ್ತಬಂಧಕಪಟ್ಟಿ ಕಟ್ಟಬಾರದು. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಬೇಕು. ಗಾಯವನ್ನು ಕತ್ತರಿಸಬಾರದು ಹಾಗೂ ಏನನ್ನೂ ಹಚ್ಚಬಾರದು. ನಾಟಿ ಔಷಧ ಅಥವಾ ಅಸುರಕ್ಷಿತ ಚಿಕಿತ್ಸಾ ಪದ್ಧತಿ ಅವಲಂಬಿಸಬೇಡಿ ಎಂದರು.ಆರೋಗ್ಯ ನಿರೀಕ್ಷಣಾಧಿಕಾರಿ ಮನಿಷ್ ಅವರು ಆರ್‌ಸಿಎಚ್, ಕುಟುಂಬ ಕಲ್ಯಾಣ ಕಾರ್ಯಕ್ರಮ, ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ವಿವರವಾಗಿ ಮಾತನಾಡಿದರು. ಸಿಎಚ್‌ಒ ರೆಡ್ಡಿ ಅವರು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾತನಾಡಿದರು. ಐಟಿಸಿಟಿ ಆಪ್ತ ಸಮಾಲೋಚಕ ಬಾಳಪ್ಪ ಎಚ್‌ಐವಿ, ಏಡ್ಸ್ ನಿಯಂತ್ರಣ ಕುರಿತು ತಿಳಿಸಿದರು. ಗ್ರಾಪಂ ಸದಸ್ಯರಾದ ಶಾರದಾ, ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಯ ಸದಸ್ಯರಾದ ಹನುಮಂತಪ್ಪ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.