ಚನ್ನಪಟ್ಟಣ: ಬೆಟ್ಟಗಳು ಕೇವಲ ಧಾರ್ಮಿಕ ಶಕ್ತಿ ಕೇಂದ್ರ ಮಾತ್ರವಲ್ಲದೇ ಅನೇಕ ಜೀವರಾಶಿಗಳನ್ನು ಹೊಂದಿರುವ ಅರಣ್ಯ ಪ್ರದೇಶಗಳಾಗಿವೆ ಎಂದು ರೋಟರಿ ಟಾಯ್ಸ್ ಸಿಟಿ ಕ್ಲಬ್ ಅಧ್ಯಕ್ಷ ರಾಜೇಶ್ ಹೇಳಿದರು.
ತಾಲೂಕಿನ ಕೋಡಂಬಳ್ಳಿ ಬಳಿಯ ಚನ್ನಪ್ಪಸ್ವಾಮಿ ಬೆಟ್ಟದಲ್ಲಿ ರೋಟರಿ ಟಾಯ್ಸ್ ಸಿಟಿ ಕ್ಲಬ್‌ನಿಂದ ‘ಸ್ವಚ್ಛೋತ್ಸವ- ನಿತ್ಯೋತ್ಸವ’ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚನ್ನಪ್ಪಸ್ವಾಮಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಚೆಲ್ಲುವುದರಿಂದ ಪರಿಸರ ಹಾಳಾಗುತ್ತದೆ. ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಧಾರ್ಮಿಕ ಕೇಂದ್ರಗಳಲ್ಲಿ, ಬೆಟ್ಟಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದರು.ರೋಟರಿ ಟಾಯ್ಸ್ ಸಿಟಿ ಕ್ಲಬ್ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ ಮಾತನಾಡಿ, ಮನೆ ಮಾತ್ರವಲ್ಲದೇ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷವಾಗಿ ಬೆಟ್ಟ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಬಾರದು. ಬೆಟ್ಟದ ದೇಗುಲ ಪರಿಸರಕ್ಕೆ ಧಕ್ಕೆ ತರುವ ವಸ್ತುಗಳಿಂದ ಮುಕ್ತವಾಗಿಡಬೇಕು ಎಂದರು.
ಮೂವತ್ತಕ್ಕೂ ಹೆಚ್ಚು ರೋಟರಿ ಸದಸ್ಯರು ಬೆಟ್ಟದಲ್ಲಿದ್ದ ಎಸೆದಿದ್ದ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಆಹಾರ ಪೊಟ್ಟಣ, ಪ್ಲಾಸ್ಟಿಕ್ ಲೋಟ, ತಟ್ಟೆ, ಚೀಲ ಇತ್ಯಾದಿ ಕಸ ಸಂಗ್ರಹಿಸಿ ಒಂದೆಡೆ ಹಾಕಿ ದಹಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸಿದರು.ರೋಟರಿ ಟಾಯ್ಸ್ ಸಿಟಿ ಶಾಖೆ ಕ್ಲಬ್ ಅಡ್ವೈಸರ್ ಬಿ.ಎಂ.ನಾಗೇಶ್, ಪದಾಧಿಕಾರಿಗಳಾದ ಮೋಹನ್, ಅಪ್ಪಾಜಿಗೌಡ, ಜಯರಾಮು, ಅರ್ಜುನ್, ರೇವಣ್ಣ, ರಘು, ಚಂದ್ರಶೇಖರ್, ಮಾಸ್ತಿ ಗೌಡ, ಮಾನಸ, ಕಲಾವತಿ, ಕವಿತಾ, ಪವಿತ್ರ, ಜೀವಿತಾ ಇದ್ದರು.
ಪೊಟೋ೧೬ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಬಳಿಯ ಚನ್ನಪ್ಪಸ್ವಾಮಿ ಬೆಟ್ಟದಲ್ಲಿ ರೋಟರಿ ಟಾಯ್ಸ್ ಸಿಟಿ ಕ್ಲಬ್‌ನಿಂದ ಸ್ವಚ್ಛತಾ ಕಾರ್ಯ ಮಾಡಲಾಯಿತು.