ವಾಹನಗಳ ಸುಸ್ಥಿತಿ ಕಾಪಾಡಿ ವಾಯು ಮಾಲಿನ್ಯ ತಡೆಗಟ್ಟಿ

KannadaprabhaNewsNetwork |  
Published : Dec 10, 2025, 01:15 AM IST
9ಕೆಪಿಎಲ್21 ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಯ ಸಮಾರೋಪ ಸಮಾರಂಭ | Kannada Prabha

ಸಾರಾಂಶ

ವಾಹನಗಳು ಹೊರಸೂಸುವ ಹೊಗೆಯಿಂದ ಗಾಳಿಯು ವಿಷಕಾರಿಯಾಗುತ್ತದೆ.

ಕೊಪ್ಪಳ: ಸಾರ್ವಜನಿಕರು ತಮ್ಮ ವಾಹನಗಳಿಗೆ ಯಾವುದೇ ಕಲಬೆರಿಕೆಯಿಲ್ಲದ ಇಂಧನ ಉಪಯೋಗಿಸಿ ಅವುಗಳ ಸುಸ್ಥಿತಿ ಕಾಪಾಡಿಕೊಂಡು ವಾಯು ಮಾಲಿನ್ಯ ತಡೆಗಟ್ಟಬೇಕೆಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಹೇಳಿದರು.

ಅವರು ಇತ್ತೀಚೆಗೆ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾಹನಗಳು ಹೊರಸೂಸುವ ಹೊಗೆಯಿಂದ ಗಾಳಿಯು ವಿಷಕಾರಿಯಾಗುತ್ತದೆ. ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳಾದ ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್, ಹೈಡ್ರೋಕಾರ್ಬನ್, ಆಕ್ಸೈಡ್ ಆಫ್ ನೈಟ್ರೋಜನ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಸ್ಪೆಂಡೆಡ್ ಪಾರ್ಟಿಕುಲೇಟ್ ಮ್ಯಾರ್‌ಗಳಿಂದ ಮಾನವನ ಆರೋಗ್ಯದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಆಗುತ್ತವೆ. ಹಾಗಾಗಿ ಹೆಚ್ಚು ಹೊಗೆ ಬಿಡುವ ವಾಹನಗಳ ಬಳಕೆ ಮಾಡಬಾರದು. ಪರಿಸರ ಸ್ನೇಹಿ ವಾಹನ ಬಳಕೆಗೆ ಆದ್ಯತೆ ನೀಡಬೇಕು ಎಂದರು.

ವಾಹನಗಳ ಹೊಗೆ ಸೂಸುವ ಪ್ರಮಾಣ ನಿಯಂತ್ರಣದಲ್ಲಿಡಲು ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳಿಗೆ ವಾಯು ಮಾಲಿನ್ಯ ತಪಾಸಣೆ ಮಾಡಿಸಬೇಕು. ವಾಹನದ ಏರ್ ಫಿಲ್ಟರ್ ಮತ್ತು ಸ್ಪಾರ್ಕ್ ಪ್ಲಗ್‌ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಹನಗಳಿಗೆ ಕಲಬೆರಕೆ ಇಂಧನ ಮತ್ತು ಕಡಿಮೆ ದರ್ಜೆಯ ಕಳಪೆ ಇಂಜಿನ್ ಆಯಿಲ್ ಉಪಯೋಗಿಸಬಾರದು. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ನವೆಂಬರ್ ತಿಂಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಾ ಜಾಗೃತಿ ಮಾಸಾಚರಣೆ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯ ನಿಯಂತ್ರಣ ಕುರಿತಾಗಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ಹಮ್ಮಿಕೊಂಡು ಅವರಿಗೂ ಸಹ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಅಮರ್ ಅವರು, ವಿವಿಧ ಬಗೆಯ ಮಾಲಿನ್ಯದ ಬಗ್ಗೆ ವಿವರಿಸಿ, ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುತ್ತಾ ವಾಯುಮಾಲಿನ್ಯ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕ್ಷಕ ಉಮೇಶ್ ಇಟಗಿ ಅವರು, ವಾಯು ಮಾಲಿನ್ಯ ತಡೆಗಟ್ಟಲು ಅನುಸರಿಸುವ ವಿಧಾನಗಳ ಬಗ್ಗೆ ವಿವರಣೆ ನೀಡಿದರು.

ಮಕ್ಕಳಿಗೆ ಪ್ರಶಸ್ತಿ: ವಾಯು ಮಾಲಿನ್ಯ ನಿಯಂತ್ರಣ ಕುರಿತು ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶಾಂತಿನಿಕೇತನ ಪಬ್ಲಿಕ್ ಶಾಲೆಯ ಮಕ್ಕಳಿಗೆ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು.

ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಜಿ.ಎಂ.ಸುರೇಶ್ ಹಾಗೂ ಮೋಟಾರು ವಾಹನ ನಿರೀಕ್ಷಕ ವಿಜೇಂದ್ರ ಡವಳಗಿ ಸೇರಿದಂತೆ ಕಚೇರಿ ಅಧೀಕ್ಷಕರು ಮತ್ತು ಇತರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ