ಮುಂಡರಗಿ: ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಆದೇಶ ಬಂದ ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಭರವಸೆ ನೀಡಿದರು.
ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ಗದಗ- ಮುಂಡರಗಿ ಪ್ರಮುಖ ರಸ್ತೆಯಲ್ಲಿ ರೈತ ಸಂಘದಿಂದ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು ಹಾಗೂ ಕಬ್ಬಿನ ದರಕ್ಕೆ ಆಗ್ರಹಿಸಿ ನೀಡುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ರೈತರನ್ನುದ್ದೇಶಿಸಿ ಮಾತನಾಡಿದರು.ರೈತ ಮುಖಂಡ ಶಿವಾನಂದ ಇಟಗಿ ಮಾತನಾಡಿ, ದೇಶದಲ್ಲಿ ಪ್ರತಿ ವಸ್ತುವಿಗೆ ನಿಗದಿತ ಬೆಲೆ ಇದೆ. ಆದರೆ ರೈತರು ಬೆಳದೆ ಬೆಳೆಗೆ ನಿಗದಿತ ಬೆಲೆ ಇಲ್ಲ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹2800 ವರೆಗೆ ಮಾರಾಟ ಮಾಡಿದ ಮೆಕ್ಕೆಜೋಳ ಪ್ರಸ್ತುತ ವರ್ಷ ₹1200ರಿಂದ ₹1800ಕ್ಕೆ ಕುಸಿದಿದೆ. ಹೀಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಬಿತ್ತಿ ಬೆಳೆದ ರೈತರ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ.
ಮುಂಡರಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದು, ಇದೀಗ ಉತ್ತಮ ದರ ಇಲ್ಲದೇ ರೈತರು ಕ್ವಿಂಟಲ್‌ಗೆ ₹300ರಿಂದ ₹1000 ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಸರ್ಕಾರ ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಈಗಾಗಲೇ ಈರುಳ್ಳಿ ಬೆಳೆ ಪ್ರದೇಶದ ವೀಕ್ಷಣೆಗಾಗಿ ಸರ್ಕಾರ ವಿಶೇಷ ತಂಡವನ್ನು ಕಳುಹಿಸಿದ್ದು, ಅವರು ಪರಿಶೀಲನೆ ನಡೆಸಿ ವರದಿ ಪಡೆದುಕೊಂಡು ಹೋಗಿದ್ದಾರೆ. ಮೆಕ್ಕೆಜೋಳಕ್ಕೆ ಶೀಘ್ರದಲ್ಲಿಯೇ ಖರೀದಿ ಕೇಂದ್ರ ಪ್ರಾರಂಭವಾಗಲಿದೆ. ಆದರೆ ಈರುಳ್ಳಿಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ಶೀಘ್ರವೇ ತೆರೆಯುವುದು ಇನ್ನೂ ವಿಳಂಬವಾಗಬಹುದು ಎಂದರು. ಆಗ ರೈತರು ನಾವು ಸಾಕಷ್ಟು ಹಣ ಖರ್ಚು ಮಾಡಿ ಬೀಜ, ಗೊಬ್ಬರ, ಆಳು ತಂದುಹಾಕಿ ಈರುಳ್ಳಿ ಬೆಳೆದಿದ್ದೇವೆ. ಇದೀಗ ಮಾರುಕಟ್ಟೆಯಲ್ಲಿ ₹1ಕ್ಕೆ ಕೆಜಿ ಕೇಳುತ್ತಿದ್ದಾರೆ. ಹೀಗಾದರೆ ರೈತರ ಪರಿಸ್ಥಿತಿ ಏನಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಅದು ತಮ್ಮ ಕೈಯಲಿಲ್ಲ. ಸರ್ಕಾರ ನಿಗದಿಪಡಿಸಬೇಕು. ತಾವು ಹೆಚ್ಚಿನ ಮುತುವರ್ಜಿ ವಹಿಸಿ ಆ ಕಾರ್ಯ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಹುಸೇನಸಾಬ್ ಕುರಿ ಮಾತನಾಡಿ, ನಾವು ಅನೇಕ ಬಾರಿ ಬೆಳೆಹಾನಿ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೂ ನಮಗೆ ಪರಿಹಾರ ಬಂದಿಲ್ಲ ಎಂದರು.
ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಈಗಾಗಲೇ ಮಳೆಯಿಂದ ಹಾನಿಗೊಳಗಾದ ಹೆಸರು ಹಾಗೂ ಮೆಕ್ಕೆಜೋಳದ ಬೆಳೆ ಪರಿಹಾರ ಜಿಲ್ಲೆಗೆ ₹91 ಕೋಟಿ ಬಿಡುಗಡೆಯಾಗಿತ್ತು. ಅದರಲ್ಲಿ ₹78 ಕೋಟಿ ಮಾತ್ರ ಬಂದಿತ್ತು. ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾದ ತಾಲೂಕುಗಳಿಗೆ ಹಾಕಿದ್ದು, ಇನ್ನೂ ಬರಬೇಕಾದ ₹13 ಕೋಟಿ ಹಾಗೂ ಹೆಚ್ಚುವರಿ ₹15 ಕೋಟಿ ಹಣ ಬರಲಿದ್ದು, ಬಂದ ತಕ್ಷಣವೇ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಿಗೂ ಪರಿಹಾರಧನ ವಿತರಣೆಯಾಗಲಿದೆ ಎಂದರು.ಈ ಭಾಗದಲ್ಲಿ ಕಬ್ಬುಬೆಳೆದ ರೈತರಿಗೆ ಇತ್ತೀಚೆಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ₹3300 ನೀಡಬೇಕು ಎಂದು ರೈತರು ಒಕ್ಕೊರಲಿನಿಂದ ಜಿಲ್ಲಾಧಿಕಾರಿಗೆ ಒತ್ತಾಯಿಸಿದಾಗ, ಈ ಕುರಿತು ಮಾತನಾಡಲು ನಾವು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದಿದ್ದು, ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮುಂದಿನ 10-12 ದಿನಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಭರವಸೆ ನೀಡಿದ ಹಿನ್ನೆಲೆ ರೈತರು ಅಹೋರಾತ್ರಿ ಸತ್ಯಾಗ್ರಹವನ್ನು ಹಿಂಪಡೆದರು.ಬೆಳಗ್ಗೆ ಪಟ್ಟಣದ ಕೋಟೆ ಭಾಗದ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ರೈತರ ಪ್ರತಿಭಟನಾ ಮೆರವಣಿಗೆ ಜಾಗೃತ ವೃತ್ತ, ಬಜಾರ, ಅಂಬಾಭವಾನಿ ನಗರ, ಬಸ್ ನಿಲ್ದಾಣ, ಬೃಂದಾವನ ವೃತ್ತ, ಕೊಪ್ಪಳ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಕಚೇರಿ ಎದುರಿನ ಗದಗ ಮುಂಡರಗಿ ಪ್ರಮುಖ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಪ್ರಾರಂಭದಲ್ಲಿ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ತಮ್ಮೆಲ್ಲ ಬೇಡಿಕೆಗಳನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಬುಧವಾರ ಗದುಗಿನಲ್ಲಿ ಜರುಗುವ ಸಭೆಯಲ್ಲಿ ಪರಿಹರಿಸಲಾಗುವುದು ಎಂದರು. ಆದರೆ ಇದಕ್ಕೆ ರೈತರು ಒಪ್ಪದ ಹಿನ್ನೆಲೆ ಜಿಲ್ಲಾಧಿಕಾರಿ ಬಂದು ರೈತರೊಂದಿಗೆ ಚರ್ಚಿಸಿ ಸತ್ಯಾಗ್ರಹ ಮುಕ್ತಾಯಗೊಳಿಸಿದರು.ಪ್ರತಿಭಟನೆಯಲ್ಲಿ ಶರಣಪ್ಪ ಕಂಬಳಿ, ಅಶ್ವಿನಿ ಗೌಡರ್, ಹಾಲಪ್ಪ ಅರಹುಣಸಿ, ಚಂದ್ರಕಾಂತ ಉಳ್ಳಾಗಡ್ಡಿ, ಶಿವನಗೌಡ ಗೌಡ್ರ, ಶಂಕರಗೌಡ ಜಾಯನಗೌಡ್ರ ಸೇರಿದಂತೆ ಅನೇಕರು ಮಾತನಾಡಿದರು. ಚಂದ್ರಪ್ಪ ಗದ್ದಿ, ಚಂದ್ರಪ್ಪ ಬಳ್ಳಾರಿ, ದ್ಯಾಮಣ್ಣ ವಾಲಿಕಾರ, ಹುಚ್ಚಪ್ಪ ಹಂದ್ರಾಳ, ಮಲ್ಲಪ್ಪ ಡೋಣಿ, ಬಿರಪ್ಪ ಮಲಾರ್ಜಿ,ಮಲ್ಲಪ್ಪ ಹಳ್ಳಿಕೇರಿ, ಬಸಪ್ಪ ಚಿಕ್ಕಣ್ಣವರ, ದೇವಪ್ಪ ಕೋಟಿ, ಡಿ.ಎ. ಕೆಂಚನಗೌಡ್ರ, ಮಾರುತೆಪ್ಪ ಡಂಬಳ, ಈರಣ್ಣ, ಬಸವರಾಜ ದಂಡಿನ, ನಿಂಗಪ್ಪ ಭಂಡಾರಿ, ನಾಗಪ್ಪ ಕವಲೂರು, ಪರಸಪ್ಪ ತಿಪ್ಪನ್ನವರ, ಬಸಪ್ಪ ಜೋಬಾಳಿ, ಪ್ರಕಾಶ ಬಡಿಗೇರ ಸೇರಿದಂತೆ ನೂರಾರು ಜನ ರೈತರು ಪಾಲ್ಗೊಂಡಿದ್ದರು.