ಇನ್ನೂ ಪ್ರಾರಂಭವಾಗದ ಮೆಕ್ಕೆಜೋಳ ಬೆಂಬಲ ಬೆಲೆ ಕೇಂದ್ರ

KannadaprabhaNewsNetwork |  
Published : Nov 16, 2025, 02:30 AM IST
15ಕೆಪಿಎಲ್22 ಕೊಪ್ಪಳ ನಗರದಲ್ಲಿ ಮೆಕ್ಕೆಜೋಳದ ಲೋಡ್ ಗಳು ಸಾಲು ಸಾಲಾಗಿ ಬಂದಿರುವುದು. | Kannada Prabha

ಸಾರಾಂಶ

ಮೆಕ್ಕೆಜೋಳ ದರ ಮಾರುಕಟ್ಟೆಯಲ್ಲಿ ಕುಸಿದಿದೆ. ಹೀಗಾಗಿ ಬೆಂಬಲ ಬೆಲೆ ಕೇಂದ್ರ ತೆರೆಯುವ ಅಗತ್ಯವಿದೆ ಎಂದು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆಅಕ್ಟೋಬರ್‌ನಲ್ಲಿ ಪ್ರಸ್ತಾವನೆ ಕಳುಹಿಸಲಾಗಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಮೆಕ್ಕೆಜೋಳ ಬೆಲೆ ಮಾರುಕಟ್ಟೆಯಲ್ಲಿ ದಿನೇ ದಿನೆ ಕುಸಿಯುತ್ತಿದ್ದು. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಮೆಕ್ಕೆಜೋಳ ಮಾರಾಟ ಮಾಡಲು ರೈತರು ಹೆಣಗಾಡುತ್ತಿದ್ದಾರೆ. ಆದರೂ ಘೋಷಿತ ಬೆಂಬಲ ಬೆಲೆಯಂತೆ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕೇವಲ ₹1700 ರಿಂದ ₹1800 ಇದೆ. ಆದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಬರೋಬ್ಬರಿ ₹2400 ಇದೆ. ಬೆಂಬಲ ಬೆಲೆಗಿಂತಲೂ ₹600 ಕುಸಿದಿದ್ದರೂ ಬೆಂಬಲ ಬೆಲೆ ಕೇಂದ್ರ ಯಾಕೆ ತೆರೆಯುತ್ತಿಲ್ಲ ಎನ್ನುವುದು ರೈತರ ಪ್ರಶ್ನೆಯಾಗಿದೆ.

ಜಿಲ್ಲಾಡಳಿತದಿಂದ ಪ್ರಸ್ತಾವನೆ: ಮೆಕ್ಕೆಜೋಳ ದರ ಮಾರುಕಟ್ಟೆಯಲ್ಲಿ ಕುಸಿದಿದೆ. ಹೀಗಾಗಿ ಬೆಂಬಲ ಬೆಲೆ ಕೇಂದ್ರ ತೆರೆಯುವ ಅಗತ್ಯವಿದೆ ಎಂದು ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆಅಕ್ಟೋಬರ್‌ನಲ್ಲಿ ಪ್ರಸ್ತಾವನೆ ಕಳುಹಿಸಲಾಗಿದೆ. ಇದುವರೆಗೂ ಸರ್ಕಾರ ಬೆಂಬಲ ಬೆಲೆ ಕೇಂದ್ರ ತೆರೆಯುವುದಕ್ಕೆ ಅನುಮತಿ ನೀಡುತ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮೆಕ್ಕೆಜೋಳ ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೆ ಮೆಕ್ಕೆಜೋಳವನ್ನು ಜಿಲ್ಲಾಡಳಿತದ ಎದುರು ಸುರುವಿ ಹೋರಾಟ ಮಾಡುತ್ತೇವೆ ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಕುರಿತು ರಾಜ್ಯ ರೈತ ಸಂಘ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಇರುವ ಬೆಂಬಲ ಬೆಲೆಯಂತೆ ಖರೀದಿ ಕೇಂದ್ರ ಯಾಕೆ ತೆರೆಯುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದರೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ರಾಜ್ಯ ಸರ್ಕಾರ ಕೂಡಲೇ ರೈತರ ನೆರವಿಗಾಗಿ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಆಗ್ರಹಿಸಿದ್ದಾರೆ.

ಮಾರುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ : ಜಿಲ್ಲೆಯಲ್ಲಿ ಈ ವರ್ಷ ಅತ್ಯಧಿಕ ಮೆಕ್ಕೆಜೋಳ ಬೆಳೆದಿದ್ದರೂ ಮಾರುಕಟ್ಟೆಯಲ್ಲಿ ನಿತ್ಯವೂ ನೂರಾರು ಟ್ರ್ಯಾಕ್ಟರ್‌, ಲಾರಿಗಳು ಬರುತ್ತಿರುವುದರಿಂದ ಕೊಪ್ಪಳ ಎಪಿಎಂಸಿ ಮಾರುಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ವೇ ಬ್ರಿಡ್ಜ್ ಕಾಟಾ ಮಾಡಿಸಲು ದಿನಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ. ಆದ್ದರಿಂದ ರೈತರು ಬೆಂಬಲ ಬೆಲೆ ಕೇಂದ್ರ ತೆರೆದು ಖರೀದಿ ಮಾಡುವಂತೆ ಆಗ್ರಹಿಸಿದ್ದಾರೆ.

ಮೆಕ್ಕೆಜೋಳ ಬೆಲೆ ಮಾರುಕಟ್ಟೆಯಲ್ಲಿ ತೀವ್ರ ಕುಸಿದಿದೆ. ಹೀಗಾಗಿ, ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು ಎಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಮನವಿಗೂ ಕ್ಯಾರೆ ಎನ್ನುತ್ತಿಲ್ಲವಾದ್ದರಿಂದ ಹೋರಾಟಕ್ಕೆ ಸಿದ್ಧತೆ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಜೀರಸಾಬ್‌ ಮೂಲಮನಿ ತಿಳಿಸಿದ್ದಾರೆ.

ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿಯಲ್ಲಿ ಖರೀದಿ ಮಾಡುವುದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ. ಇದುವರೆಗೂ ಅನುಮತಿ ಬಂದಿಲ್ಲ. ರೈತ ಸಂಘಟನೆಗಳು ಹಲವಾರು ಬಾರಿ ಮನವಿ ಮಾಡಿದ್ದರಿಂದ ಮತ್ತೊಮ್ಮೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ