ಹುಬ್ಬಳ್ಳಿ:
ಯಾವುದೇ ಚರ್ಚೆಯಿಲ್ಲದೇ ಕಳೆದ ಸಾಮಾನ್ಯ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರವನ್ನಾಗಿಸಬೇಕು. ಧಾರವಾಡ ಪ್ರತ್ಯೇಕ ಪಾಲಿಕೆ ಬೇಡ ಎಂದು ನಿರ್ಣಯ ಕೈಗೊಂಡಿದ್ದ ಮಹಾನಗರ ಪಾಲಿಕೆಯು ತನ್ನ ನಿರ್ಣಯ ಕೈಬಿಟ್ಟಿದೆ. ಇದೀಗ ರಾಜ್ಯಪಾಲರು ಧಾರವಾಡ ಮಹಾನಗರ ಪಾಲಿಕೆಗೆ ಷರತ್ತು ಬದ್ಧ ಅಂಕಿತ ಹಾಕಿದ್ದು ಹಿಂದಿನ ನಿರ್ಣಯ ಕೈಬಿಡಲಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ರೂಲಿಂಗ್ ನೀಡಿದರು.
ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯ ಕೈಬಿಡಬೇಕೆಂದು ಆಗ್ರಹಿಸಿ ಪಾಲಿಕೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು, ಮೇಯರ್ ರೂಲಿಂಗ್ ನೀಡುತ್ತಿದ್ದಂತೆ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಇದಕ್ಕೂ ಮುನ್ನ ವಿರೋಧ ಹಾಗೂ ಆಡಳಿತ ಪಕ್ಷದ ಸದಸ್ಯರಲ್ಲಿ ತೀವ್ರ ವಾಗ್ವಾದವೂ ನಡೆಯಿತು.ಏನಾಗಿತ್ತು?
ಇವೆಲ್ಲದರ ನಡುವೆ ಪ್ರತ್ಯೇಕ ಪಾಲಿಕೆ ಬೇಕೆಂದು ಧಾರವಾಡದಲ್ಲಿ ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಂಡಿತ್ತು. ರಾಜ್ಯಪಾಲರು ಸಹ ಕಳೆದ ವಾರ ಸರ್ಕಾರದ ಪ್ರಸ್ತಾವನೆಗೆ ಅಂಕಿತ ಕೂಡ ಹಾಕಿದ್ದರು.
ಬೃಹತ್ ಪಾಲಿಕೆ ನಿರ್ಣಯ ಕೈಬಿಡಬೇಕೆಂದು ಆಗ್ರಹಿಸಿ ಹೋರಾಟಗಾರ, ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಪಾಲಿಕೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಭೆ ಪ್ರಾರಂಭಕ್ಕೂ ಮುನ್ನ ಹಿಂದಿನ ಸಭೆಯಲ್ಲಿನ ನಿರ್ಣಯ ಕೈಬಿಡಬೇಕೆಂದು ಒತ್ತಾಯಿಸಿದ್ದರು.
ಇತ್ತ ಸಭೆಯಲ್ಲಿ ವಿಪಕ್ಷ ನಾಯಕ ಇಮ್ರಾನ್ ಎಲಿಗಾರ್, ಪಾಲಿಕೆ ಕುರಿತಂತೆ ಕೈಗೊಂಡಂತಹ ನಿರ್ಣಯದಲ್ಲಿ ನಾವು ವಿರೋಧ ವ್ಯಕ್ತಪಡಿಸಿದರೂ ಠರಾವಿನಲ್ಲಿ ಏಕೆ ನಮೂದಿಸಿಲ್ಲವೆಂದು ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ನಡುವೆ ತೀವ್ರ ವಾಗ್ವಾದವೂ ನಡೆದು ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಈ ಗೊಂದಲದ ನಡುವೆ ಸಭೆಯನ್ನು 10 ನಿಮಿಷ ಮುಂದೂಡಲಾಯಿತು.
ಬಳಿಕ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೆಲ್ಲರೂ ಪ್ರತ್ಯೇಕ ಪಾಲಿಕೆಗೆ ನಮ್ಮ ವಿರೋಧವಿಲ್ಲ. ನಾವು ಕೈಗೊಂಡಂತಹ ನಿರ್ಣಯವನ್ನು ಇನ್ನು ದೃಢೀಕರಣ ಮಾಡಿಲ್ಲ. ಆದಕಾರಣ ಅದು ಅಸ್ತಿತ್ವದಲ್ಲೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಜತೆಗೆ ಪ್ರತ್ಯೇಕ ಪಾಲಿಕೆ ಮಾಡಲು ಎಲ್ಲರದು ಒಪ್ಪಿಗೆ ಇದೆ. ಆದರೆ, ಕಾಂಗ್ರೆಸ್‌ನವರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದ ಸದಸ್ಯರು, ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು.
ರಾಜ್ಯಪಾಲರು ಅಂಕಿತ ಹಾಕಿ ಸರ್ಕಾರಕ್ಕೆ ಕಳಿಸಿದ್ದಾರೆ. ಇದರಲ್ಲಿ ರಾಜಕೀಯ ಮಾಡದೆ ಕಾಂಗ್ರೆಸ್ ನಾಯಕರು ಅನುಷ್ಠಾನಗೊಳಿಸಬೇಕು. ರಾಜ್ಯಪಾಲರು ಹೇಳಿದಂತೆ ಎರಡು ಪಾಲಿಕೆಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು. ಸಭಾನಾಯಕ ಈರೇಶ ಅಂಚಟಗೇರಿ, ವೀರಣ್ಣ ಸವಡಿ, ಶಿವು ಹಿರೇಮಠ, ಶಂಕರ ಶೇಳಕೆ, ರಾಜಣ್ಣ ಕೊರವಿ ಸೇರಿದಂತೆ ಹಲವರು ಸ್ವಾಗತಿಸಿ ಮಾತನಾಡಿದರು.
ವಿಜಯೋತ್ಸವ:
ಈ ನಡುವೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು, ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದರು. ಪಾಲಿಕೆ ಆವರಣದಲ್ಲಿ ಕುಣಿದು ಕುಪ್ಪಳಿಸಿದ ಹೋರಾಟಗಾರರು, ಅಲ್ಲಿಂದ ಮೆರವಣಿಗೆ ಮೂಲಕ ಧಾರವಾಡಕ್ಕೆ ತೆರಳಿದರು.ಕಾಂಗ್ರೆಸ್ಸಿಗರ ರಾಜೀನಾಮೆ ಏನಾಯ್ತು?ಈ ನಡುವೆ ಚರ್ಚೆ ವೇಳೆ ಪ್ರತ್ಯೇಕ ಪಾಲಿಕೆಗಾಗಿ ನಡೆದ ಹೋರಾಟದಲ್ಲಿ 12 ಜನ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡಿದ್ದಾರಂತೆ. ಪತ್ರಿಕೆಗಳಲ್ಲಿ ಬಂದಿದೆ. ಹಾಗಾದರೆ ಅವರು ರಾಜೀನಾಮೆ ಪತ್ರ ಯಾರಿಗೆ ಕೊಟ್ಟಿದ್ದಾರೆ. ರಾಜೀನಾಮೆ ಅಂಗೀಕಾರ ಆಗಿದೆಯೋ? ಅಥವಾ ಜನರ ಹಾದಿ ತಪ್ಪಿಸಲು ಮಾಡಿರುವ ನಾಟಕವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಸದಸ್ಯ ಶಂಕರ ಶೇಳಕೆ ಪ್ರಶ್ನಿಸಿದರು. ಆದರೆ, ಆಯುಕ್ತರು ಆಗ ಉತ್ತರ ಕೊಡಲಿಲ್ಲ. ಕೊನೆಗೆ ಮತ್ತೊಮ್ಮೆ ಇದನ್ನು ನೆನಪಿಸಿದ ಶೇಳಕೆ ಅವರಿಗೆ ಮೇಯರ್ ಉತ್ತರ ಕೊಡಿಸುವುದಾಗಿ ಅಷ್ಟೇ ಭರವಸೆ ನೀಡಿದರು.
ವೀಕ್ಷಕರ ಗ್ಯಾಲರಿಯಲ್ಲಿ ಹಿರೇಮಠ!ಪ್ರತ್ಯೇಕ ಪಾಲಿಕೆಗಾಗಿ ಆಗ್ರಹಿಸಿ ಪಾಲಿಕೆ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರ ಬಿ.ಡಿ. ಹಿರೇಮಠ, ಪ್ರತ್ಯೇಕ ಪಾಲಿಕೆ ಕುರಿತು ಚರ್ಚೆ ನಡೆದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಚರ್ಚೆ ಆಲಿಸಿದರು. ಸುಮಾರು 15 ನಿಮಿಷ ಚರ್ಚೆ ಆಲಿಸಿ ಪ್ರತ್ಯೇಕ ಪಾಲಿಕೆ ಕುರಿತು ನಿರ್ಣಯ ಕೈಗೊಂಡ ಬಳಿಕ ಸಭೆಗೆ ಕೈಮುಗಿದು ಅಲ್ಲಿಂದ ತೆರಳಿದರು.