ಗದಗಿನಲ್ಲಿ ಐಪಿಎಲ್ ಬೆಟ್ಟಿಂಗ್ ಜೋರು!

KannadaprabhaNewsNetwork |  
Published : May 30, 2026, 02:00 AM IST
ಎಸ್ಪಿ ರೋಹನ್ ಜಗದೀಶ. | Kannada Prabha

ಸಾರಾಂಶ

ಐಪಿಎಲ್ ಸೀಸನ್ ಆರಂಭವಾದ ದಿನದಿಂದಲೂ ಗದಗ ಪೊಲೀಸರು ಬುಕ್ಕಿಗಳನ್ನು ಬೇಟೆಯಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 13ರಿಂದ ಮೇ 21ರ ವರೆಗೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ.

ಗದಗ: ಐಪಿಎಲ್ ಫೈನಲ್ ಹಂತಕ್ಕೆ ಬಂದು ತಲುಪಿದ್ದು, ಫೈನಲ್ ಪೂರ್ವದಲ್ಲಿ ಐಪಿಎಲ್ ಬೆಟ್ಟಿಂಗ್ ಅತ್ಯಂತ ಜೋರಾಗಿ ನಡೆದಿದ್ದು, ಜಿಲ್ಲೆಯಲ್ಲಿ ಕ್ರೀಡೆಯ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಹಣವನ್ನು ಪಣಕ್ಕಿಡುವ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಈ ದಂಧೆ ಸಾರ್ವಜನಿಕ ರಸ್ತೆ, ಬಸ್ ನಿಲ್ದಾಣ, ಕಾಲೇಜು ಹಾಸ್ಟೆಲ್‌ ಹಾಗೂ ಟೀ ಸ್ಟಾಲ್ ಗಳ ಮುಂದೆ ನಿಂತು ಯುವಕರ ಜೇಬಿಗೆ ಕತ್ತರಿ ಹಾಕುವ ಬುಕ್ಕಿಗಳು ಜಿಲ್ಲಾದ್ಯಂತ ಸಕ್ರಿಯರಾಗಿದ್ದಾರೆ.‌

13 ಪ್ರಕರಣಗಳು ದಾಖಲು: ಐಪಿಎಲ್ ಸೀಸನ್ ಆರಂಭವಾದ ದಿನದಿಂದಲೂ ಗದಗ ಪೊಲೀಸರು ಬುಕ್ಕಿಗಳನ್ನು ಬೇಟೆಯಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಪ್ರಿಲ್ 13ರಿಂದ ಮೇ 21ರ ವರೆಗೆ ಒಟ್ಟು 13 ಪ್ರಕರಣಗಳು ದಾಖಲಾಗಿವೆ. ಗದಗ ಶಹರ, ಗದಗ ಗ್ರಾಮೀಣ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಳಗುಂದ ಹಾಗೂ ಶಿರಹಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಪೊಲೀಸರು ಒಟ್ಟು 16 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹14920 ನಗದು, ಮೊಬೈಲ್ ಹಾಗೂ ಸ್ಕೋರ್ ಕಾರ್ಡ್‌‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಜಿಟಲ್ ಪಾವತಿ: ಸರ್ಕಾರ ಅಧಿಕೃತವಾಗಿ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಿದ್ದರೂ ಜಿಲ್ಲೆಯ ಯುವಕರು ಮಾತ್ರ ಸ್ಮಾರ್ಟ್‌ಫೋನ್ ಮೂಲಕ ಮುಳಗುಂದ ಹಾಗೂ ಲಕ್ಷ್ಮೇಶ್ವರ ಭಾಗಗಳಲ್ಲಿ ಬುಕ್ಕಿಗಳು ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ಸೃಷ್ಟಿಸಿಕೊಂಡು, ಪ್ರತಿ ಒವರ್ ಹಾಗೂ ರನ್‌ಗಳ ಮೇಲೆ ಡಿಜಿಟಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ಹಣದ ವ್ಯವಹಾರವೆಲ್ಲವೂ ಯುಪಿಐ ಮೂಲಕವೇ ನಡೆಯುತ್ತಿರುವುದರಿಂದ, ಸ್ಥಳೀಯ ಮಟ್ಟದಲ್ಲಿ ರಹಸ್ಯವಾಗಿ ನಡೆಯುವ ಇಂತಹ ಆನ್‌ಲೈನ್ ದಂಧೆಯನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹತ್ತು ಪಟ್ಟಿನ ಆಮಿಷ: ಪಂದ್ಯವನ್ನು ಯಾರು ಗೆಲ್ಲುತ್ತಾರೆ, ಯಾವ ಬ್ಯಾಟ್ಸ್‌ಮನ್ ಎಷ್ಟು ರನ್ ಹೊಡೆಯುತ್ತಾನೆ ಎನ್ನುವುದರ ಜತೆಗೆ ಈಗ ಪ್ರತಿ ಎಸೆತದ ಮೇಲೆಯೂ ಬೆಟ್ಟಿಂಗ್ ನಡೆಯುತ್ತಿದೆ. ಕೆಲ ಬುಕ್ಕಿಗಳು 100ಕ್ಕೆ 200 ಕೊಡುವ ಆಮಿಷವೊಡ್ಡುತ್ತಿದ್ದರೆ, ಇನ್ನು ಕೆಲವರು ₹100ಕ್ಕೆ ₹1000, ಅಂದರೆ ಹತ್ತು ಪಟ್ಟು ಹೆಚ್ಚು ಹಣ ನೀಡುವ ಆಮಿಷ ತೋರಿಸುತ್ತಿದ್ದಾರೆ. ಇದರಲ್ಲಿ ಕೇವಲ ಜಿಲ್ಲೆಯ ಯುವಕರು ಮಾತ್ರವಲ್ಲ ಅಕ್ಕಪಕ್ಕದ ಬಾಗಲಕೋಟೆ, ಹಾವೇರಿ, ಕೊಪ್ಪಳ ಜಿಲ್ಲೆಯ ಯುವಕರು ಬಲಿಯಾಗುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಮತ್ತಷ್ಟು ಹೆಚ್ಚಾಗುವ ಭೀತಿ:

ಜಿಲ್ಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸಿ, ಸರಣಿ ಪ್ರಕರಣಗಳನ್ನು ದಾಖಲಿಸಿ ಬುಕ್ಕಿಗಳನ್ನು ಬಂಧಿಸುತ್ತಿದ್ದರೂ ಬೆಟ್ಟಿಂಗ್ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಸದ್ಯ ಐಪಿಎಲ್ ಫೈನಲ್‌ನಂಥ ನಿರ್ಣಾಯಕ ಹಂತಕ್ಕೆ ತಲುಪಿರುವುದರಿಂದ, ಮುಂದಿನ ದಿನಗಳಲ್ಲಿ ಬೆಟ್ಟಿಂಗ್ ದಂಧೆ ಮತ್ತಷ್ಟು ಜೋರಾಗುವ ಲಕ್ಷಣಗಳಿವೆ. ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪಾಲಕರು ಕಷ್ಟಪಟ್ಟು ದುಡಿದ ಹಣವನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಳ್ಳದಂತೆ ಜಾಗೃತಿ ವಹಿಸಬೇಕಿದೆ.

ಕಟ್ಟುನಿಟ್ಟಿನ ಕ್ರಮ: ಐಪಿಎಲ್ ಬೆಟ್ಟಿಂಗ್ ಕುರಿತಂತೆ ಈಗಾಗಲೇ ನಿರಂತರ ತನಿಖೆ ನಡೆಯುತ್ತಲೇ ಇರುತ್ತದೆ. ಪ್ರತಿದಿನವೂ ಮಾಹಿತಿ ಆಧರಿಸಿ ಬುಕ್ಕಿಗಳನ್ನು ಬಂಧಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಕ್ರಮ ದಂಧೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ಎಸ್ಪಿ ರೋಹನ ಜಗದೀಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದಲ್ಲಿ ಪ್ರಾಣಹಾನಿ ತಡೆಗೆ ಮುನ್ನಚ್ಚರಿಕೆ ವಹಿಸಿ
ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟ ಕೊಪ್ಪಳ ಜಿಲ್ಲೆಯ ಶಾಸಕರು