ಹೊಸಕೋಟೆ: ಮಕರ ಸಂಕ್ರಾಂತಿ ಹಬ್ಬ ಭಾರತ ದೇಶದ ಸಂಸ್ಕೃತಿ ಸಂಪ್ರದಾಯವನ್ನು ಅನಾವರಣದ ಪ್ರತೀಕದ ಹಬ್ಬವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಟೌನ್ ಬಿಜೆಪಿ ಅಧ್ಯಕ್ಷ ಡಾ.ಸಿ. ಜಯರಾಜ್ ತಿಳಿಸಿದರು.
ತಾಯಿಯ ಹೆಸರಲ್ಲಿ ಗೋಸೇವೆ:
ನಾನು ಬಾಲ್ಯದಿಂದಲೂ ಗೋವುಗಳನ್ನು ಪ್ರೀತಿಸುತ್ತೇನೆ. ನನ್ನ ತಾಯಿ ಕೂಡ ಪಶು ಸಾಕಾಣಿಕೆ ಮಾಡುತ್ತಿದ್ದರು. ಕಷ್ಟ ಬಂದಾಗ ಆ ಗೋವನ್ನು ಮಾರಿದ ಸಮಯದಲ್ಲಿ ಕಣ್ಣೀರು ಹಾಕಿದ್ದರು. ಆದ್ದರಿಂದ ಅವರ ಹೆಸರಿನಲ್ಲಿ ಸಂಕ್ರಾಂತಿ ಹಬ್ಬದಂದು ಪಶುಗಳಿಗೆ ಆಹಾರ ವಿತರಿಸಿ ಉತ್ತಮ ರಾಸುಗಳಿಗೆ ಬಹುಮಾನ, ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್ ವಿತರಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಸೂರ್ಯ ಪಥ ಬದಲಿಸುವ, ಹವಾಮಾನ ಬದಲಾಗುವ ಹಾಗೂ ದೇಶದ ಹಲವು ಭಾಗಗಳಲ್ಲಿ ಕೊಯ್ಲು ಪ್ರಾರಂಭವಾಗುವ ಈ ಸಂದರ್ಭವನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಆಚರಣೆ ಮಾಡಲಾಗುತ್ತಿದೆ. ಅಂತೆಯೆ ಹೊಸಕೋಟೆಯಲ್ಲಿ ಸುಮಾರು ೨೮ ವರ್ಷಗಳಿಂದ ನಮ್ಮ ತಾಯಿ ಹೆಸರಿನಲ್ಲಿ ಸಾವಿರಾರು ರು. ಬೆಲೆಬಾಳುವಷ್ಟು ಪಶು ಆಹಾರವನ್ನು ಸಾವಿರಾರು ರಾಸುಗಳಿಗೆ ವಿತರಿಸುವ ಮೂಲಕ ಆಚರಣೆ ಮಾಡುತ್ತಿದ್ದೇವೆ. ಸೂರ್ಯ ಪಥ ಬದಲಾದಂತೆ ಎಲ್ಲರ ಬದುಕಿನ ಪಥವು ಅಭಿವೃದ್ಧಿಯತ್ತ ಸಾಗಲಿ ಎಂದು ಆಶಿಸಿದರು.ಎರಡು ಸಾವಿರಕ್ಕೂ ಹೆಚ್ಚಿನ ರಾಸುಗಳಿಗೆ ಪಶು ಆಹಾರದ ಮೂಟೆ ವಿತರಿಸಲಾಯಿತು. ಭಾರತೀಯ ಸಂಸ್ಕೃತಿ ಪರಂಪರೆ ಬಿಂಬಿಸುವ ರಾಸುಗಳ ರ‍್ಯಾಂಪ್ ಶೋ ಹಾಗೂ ಮಕ್ಕಳ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ವಹ್ನಿಕುಲತಿಗಳ ಸಮುದಾಯದ ಮುಖಂಡ ಹೂಡಿ ವಿಜಿಕುಮಾರ್, ನಿವೃತ್ತ ಎಪಿಸಿ ಸುಬ್ಬಣ್ಣ, ಬಮೂಲ್ ನಿರ್ದೇಶಕ ಹುಲ್ಲೂರು ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಸತೀಶ್, ಸಚಿನ್, ಲಕ್ಷ್ಮೀ ಇತರರು ಉಪಸ್ಥಿತರಿದ್ದರು.ಫೋಟೋ: 17 ಹೆಚ್‌ಎಸ್‌ಕೆ 1
ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ‍್ಯಕ್ರಮದಲ್ಲಿ ಉತ್ತಮ ರಾಸಗಳಿಗೆ ಟೌನ್ ಬಿಜೆಪಿ ಅಧ್ಯಕ್ಷ ಡಾ.ಸಿ.ಜಯರಾಜ್ ಬಹುಮಾನ ವಿತರಿಸಿದರು. ಹೂಡಿ ವಿಜಿಕುಮಾರ್, ನಿವೃತ್ತ ಎಪಿಸಿ ಸುಬ್ಬಣ್ಣ, ಬಮೂಲ್ ನಿರ್ದೇಶಕ ಹುಲ್ಲೂರು ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಸತೀಶ್, ಸಚಿನ್, ಲಕ್ಷ್ಮೀ ಇತರರಿದ್ದರು.