ಕುಷ್ಟಗಿ: ತಾಲೂಕು ಕೇಂದ್ರ ಕುಷ್ಟಗಿ ನಗರವನ್ನು ಹಸಿರು ನಗರವನ್ನಾಗಿ ಮಾಡಲು ಪ್ರತಿಯೊಬ್ಬರು ಪಣ ತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಂಜುನಾಥ ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ಇಂದಿನ ಕಾಲಘಟ್ಟದ ಅತ್ಯಂತ ದೊಡ್ಡ ಸವಾಲಾಗಿದ್ದು, ಪ್ರಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಹೇಳಿದರು.
ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಜಲಮೂಲಗಳ ಮಾಲಿನ್ಯ ಹಾಗೂ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ಇದರ ಪರಿಣಾಮ ಮಾನವ ಜೀವನ ಸೇರಿದಂತೆ ಸಮಸ್ತ ಜೀವಸಂಕುಲ ಸಂಕಷ್ಟಕ್ಕೆ ಸಿಲುಕುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಅದರ ಪೋಷಣೆಯ ಹೊಣೆ ಹೊತ್ತುಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು. ಪರಿಸರ ರಕ್ಷಣೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ಎಂ.ಎಲ್.ಪೂಜೇರಿ, ಮಹಾಂತೇಶ ಚೌವಲಗಿ, ತಹಸೀಲ್ದಾರ ಗುರುರಾಜ ಚಲವಾದಿ, ತಾಪಂ ಇಒ ಅಮರೇಶ, ಸಿಪಿಐ ವಿಶ್ವನಾಥ ಹಿರೇಗೌಡರ, ಪಿಎಸ್ಐ ಹನಮಂತಪ್ಪ ತಳವಾರ್, ಶಿವರಾಜ ಮೇಟಿ, ಶಿವಕುಮಾರ ಜಿ,ಇಂದಿರಾ ಸುಹಾಸಿನಿ, ಎಲ್ ರಾಯನಗೌಡ, ಶಶಿಧರ ಶೆಟ್ಟರ್, ಶಾರದಾ ಶೆಟ್ಟರ್, ಡಾ. ಪಾರ್ವತಿ ಪಳೋಟಿ, ವಂದನಾ ಗೋಗಿ, ಡಾ. ರವಿಕುಮಾರ ದಾನಿ, ಮಹಾಂತಯ್ಯ ಅರಳೇಲಿಮಠ, ವೀರೇಶ ಬಂಗಾರ ಶೆಟ್ಟರ್, ದೇವೇಂದ್ರಪ್ಪ ಬಳೂಟಗಿ, ಶ್ರೀಕಾಂತಗೌಡ ಪಾಟೀಲ, ಪಿಡಿಒ ಶ್ರೀಶೈಲ ಪೋಲೇಸಿ ಸೇರಿದಂತೆ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ಲೋಬಲ್ ಶಾಲೆ ವಿದ್ಯಾರ್ಥಿಗಳು. ವಿವಿಧ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.