ವಿಕಸಿತ ಭಾರತಕ್ಕೆ ಅಮೂಲ್ಯ ಕೊಡುಗೆ ನೀಡಿ: ಉಪರಾಷ್ಟ್ರಪತಿ ರಾಧಾಕೃಷ್ಣನ್

KannadaprabhaNewsNetwork |  
Published : May 30, 2026, 03:00 AM IST
29ಕೆಡಿವಿಜಿ6, 7, 8-ದಾವಣಗೆರೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್‌. ....................29ಕೆಡಿವಿಜಿ9, 10-ದಾವಣಗೆರೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್‌........................29ಕೆಡಿವಿಜಿ11-ದಾವಣಗೆರೆಯಲ್ಲಿ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್‌, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸನ್ಮಾನಿಸಿದರು. | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡುತ್ತಿದ್ದು, 2047ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸಲು ಯುವ ಇಂಜಿನಿಯರ್‌ಗಳು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡುತ್ತಿದ್ದು, 2047ರ ಹೊತ್ತಿಗೆ ವಿಕಸಿತ ಭಾರತವನ್ನಾಗಿಸಲು ಯುವ ಇಂಜಿನಿಯರ್‌ಗಳು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕರೆ ನೀಡಿದರು.

ನಗರದ ಯುಬಿಡಿಟಿ ಕಾಲೇಜಿನಲ್ಲಿ ಶುಕ್ರವಾರ ಬೆಳಗಾವಿ ವಿಟಿಯು ಹಮ್ಮಿಕೊಂಡಿದ್ದ ಯುಬಿಡಿಟಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶ ಪ್ರಗತಿಗಾಗಿ ಯುವ ಶಕ್ತಿ ಮಾದಕ ದ್ರವ್ಯ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ದೇಶದ ಅಭಿವೃದ್ಧಿಗೆ ರಾಯಭಾರಿಗಳಾಗಬೇಕು. ಡ್ರಗ್ಸ್‌ಗೆ ಹೇಳಿ ನೋ, ದೇಶದ ಪ್ರಗತಿಗೆ ಸಾಥ್ ನೀಡಿ ಎಂದರು.

ಕರ್ನಾಟಕದ ಹೆಮ್ಮೆಯ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಯುಬಿಡಿಟಿ ಎಂಬುದು ಹೆಮ್ಮೆಯ ಸಂಗತಿ. 1951ರಲ್ಲಿ ಕಾಲೇಜನ್ನು ಕಟ್ಟಲು ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ದೂರದೃಷ್ಟಿ ಹಾಗೂ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಕೊಡುಗೆಯು ಅವಿಸ್ಮರಣೀಯವಾದುದು. 75 ವರ್ಷದಲ್ಲಿ 30 ಸಾವಿರಕ್ಕೂ ಅಧಿಕ ಎಂಜಿನಿಯರ್‌ಗಳು, ಸಂಶೋಧಕರನ್ನು ದೇಶಕ್ಕೆ, ಜಗತ್ತಿಗೆ ನೀಡಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ. ಇದು ಕೇವಲ ಸಂಸ್ಥೆಯಲ್ಲ, ದೇಶದ ತಾಂತ್ರಿಕ ಶಿಕ್ಷಣಧ ಹೆಮ್ಮೆಯ ಪಿಲ್ಲರ್ ಆಗಿದೆ ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಪ್ರಸ್ತುತ ಭಾರತವು ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್ ತಯಾರಿಕೆ, ಗ್ರೀನ್ ಎನರ್ಜಿಯಂತಹ ಅತ್ಯಾಧುನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ನಾವು ಇಡೀ ಮಾನವ ಕುಲಕ್ಕೆ ಒಳಿತಾಗುವಂತಹ ಸಕಾರಾತ್ಮಕ ಬದಲಾವಣೆ ತರುತ್ತಿದ್ದೇವೆ. ಈ ತಂತ್ರಜ್ಞಾನ ಕ್ರಾಂತಿಯ ಸಾರಥ್ಯವನ್ನು ಇಂದಿನ ಯುವ ಎಂಜಿನಿಯರ್‌ಗಳು ವಹಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜಾಗತಿಕ ಮಟ್ಟದಲ್ಲಿ ಯುಬಿಡಿಟಿ ಕಾಲೇಜಿ ಹಳೆಯ ವಿದ್ಯಾರ್ಥಿಗಳು ಮಿಂಚುತ್ತಿದ್ದಾರೆ. ಯುಬಿಡಿಟಿ ಹಳೆಯ ವಿದ್ಯಾರ್ಥಿಗಳು ಇಂದು ವಿಶ್ವದ ವಿವಿಧ ಮೂಲೆಗಳಲ್ಲಿ ಕಾರ್ಪೊರೇಟ್, ರಾಜಕೀಯ, ಆಡಳಿತ, ಎನ್‌ಜಿಒ, ಕಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವುದು ಸಂಸ್ಥೆಯ ನಿಜವಾದ ಶಕ್ತಿಯಾಗಿದೆ. ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳಾಗಿದ್ದಾರೆ ಎಂದು ಶ್ಲಾಘಿಸಿದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಕರ್ನಾಟಕ ರಾಜ್ಯವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎನ್ನಲಾಗುತ್ತದೆ. ಇದಕ್ಕೆ ಇಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿಭಾವಂತ ಯುವಕರೇ ಕಾರಣ. ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು 7 ದಶಕಕ್ಕೂ ಹೆಚ್ಚು ಕಾಲದಿಂದ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯೊಂದಿಗೆ ಮಾನವೀಯ ಮೌಲ್ಯ ಬೆಳೆಸುವಲ್ಲಿ ಶ್ರಮಿಸಿದೆ. ಇಲ್ಲಿ ಓದಿದ ಸಾವಿರಾರು ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಆಡಳಿತಾಧಿಕಾರಿಗಳಾಗಿ ದೇಶ-ವಿದೇಶಗಳಲ್ಲಿ ಸಂಸ್ಥೆಯ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳು ಯುವಕರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿವೆ. ದೇಶದ ಯುವಶಕ್ತಿಯು ದೊಡ್ಡ ಕನಸುಗಳನ್ನು ಕಾಣುತ್ತಾ, ನಿರಂತರ ಕಲಿಯುತ್ತ ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ಭಾರತವನ್ನು ‘ವಿಶ್ವಗುರು’ ಮಾಡಲು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಡಾ.ಎಂ.ಸಿ.ಸುಧಾಕರ್, ಎಸ್.ಎಸ್.ಮಲ್ಲಿಕಾರ್ಜುನ್‌, ಎಸ್.‌ ಎಸ್.ಮಲ್ಲಿಕಾರ್ಜುನ್‌, ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‌ಡಾ.ಪ್ರಭಾ ಮಲ್ಲಿಕಾರ್ಜುನ, ಎಐಸಿಟಿಇ ಟಿ.ಜಿ.ಸೀತಾರಾಮ್, ವಿಟಿಯು ಕುಲಪತಿ ಡಾ.ವಿದ್ಯಾಶಂಕರ ಇತರರು ಇದ್ದರು.

ಸೇ ನೋ ಟು ಡ್ರಗ್ಸ್‌: ಉಪರಾಷ್ಟ್ರಪತಿ

ಮಾದಕ ದ್ರವ್ಯಗಳ ಪಿಡುಗಿನ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಬೇಕು. ಯುವಜನತೆ ಮಾದಕ ದ್ರವ್ಯಗಳ ವ್ಯಸನದಿಂದ ಸಂಪೂರ್ಣ ದೂರವಿರಬೇಕು. ನಾವಷ್ಟೇ ಅಲ್ಲ, ನಮ್ಮ ಸ್ನೇಹಿತರು, ನಮ್ಮ ಕುಟುಂಬ ಹಾಗೂ ಇಡೀ ಸಮಾಜವೇ ಒಟ್ಟಾಗಿ ಒಕ್ಕೊರಲಿನಿಂದ ಡ್ರಗ್ಸ್‌ಗೆ ನೋ ಎನ್ನಬೇಕು. ನಿಮ್ಮ ಬುದ್ಧಿಶಕ್ತಿ ನಿಮ್ಮ ನಿಯಂತ್ರಣದಲ್ಲಿರಬೇಕೇ ವಿನಾ ಯಾವುದೇ ವ್ಯಸನಗಳಿಗಲ್ಲ. ಉತ್ತಮ ಆರೋಗ್ಯ ಕಾಪಾಡಿಕೊಂಡು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಮುಂದಾಗಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರಿಗೆ ಕೃಷಿ ಪೂರಕ ಸೌಲಭ್ಯ ಕಲ್ಪಿಸಿ: ರೈತ ಸಂಘ
ದುಗ್ಗಹಳ್ಳಿಯಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ