ರಾಮನಗರ: ನಗರಸಭೆ ವ್ಯಾಪ್ತಿಯ ವ್ಯಾಪಾರಸ್ಥರು ಹಾಗೂ ಉದ್ದಿಮೆ ಮಾಲೀಕರು ಏಪ್ರಿಲ್ 1ರೊಳಗೆ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್)ಅನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಂಪನ್ಮೂಲದ ಕ್ರೂಢೀಕರಣದ ಅವಶ್ಯಕತೆ ಇದೆ. ಉದ್ದಿಮೆ ಪರವಾನಗಿಯಿಂದಲೇ ನಗರಸಭೆಗೆ 1.50 ಕೋಟಿ ರು. ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 2500 ವ್ಯಾಪಾರದ ಮಳಿಗೆಗಳಿವೆ. ನಗರಸಭೆಗೆ ಸಂಪನ್ಮೂಲ ಕ್ರೂಢೀಕರಣವಾಗದಿದ್ದರೆ ಅಭಿವೃದ್ಧಿ, ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸಾಧ್ಯವಿಲ್ಲ. ಹೀಗಾಗಿ ವ್ಯಾಪಾರಸ್ಥರು, ಉದ್ದಿಮೆದಾರರು ಪರವಾನಗಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇ-ಖಾತೆ ವಿತರಣೆಗೆ ವೇಗ ಸಿಕ್ಕಿದೆ. 6ನೇ ಹಂತದಲ್ಲಿ ಸುಮಾರು 100 ಜನರಿಗೆ ವಿದ್ಯುನ್ಮಾನ ಖಾತೆಗಳನ್ನು ವಿತರಿಸಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 800 ಇ-ಖಾತೆಗಳನ್ನು ವಿತರಿಸಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮವನ್ನು ಶ್ಲಾಘಿಸಿದರು.
ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ರಾಮನಗರವನ್ನು ರೂಪಿಸಲು ಸಂಕಲ್ಪ ಮಾಡಲಾಗಿದೆ. ನಗರವನ್ನು ಕಸ ಮುಕ್ತ, ಪರಿಸರ ಸ್ನೇಹಿಯನ್ನಾಗಿಸುವ ಮತ್ತು ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ಕೊಡಲಾಗುತ್ತದೆ. ಆಯವ್ಯಯದ ನಂತರ ಈ ವಿಚಾರದಲ್ಲಿ ನಾಗರಿಕರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
13ಕೆಆರ್ ಎಂಎನ್ 7.ಜೆಪಿಜಿ