ಸ್ವಚ್ಛತೆ ದೈನಂದಿನ ಬದುಕಿನ ಭಾಗವಾಗಲಿ

KannadaprabhaNewsNetwork |  
Published : Aug 03, 2026, 02:30 AM IST
ಪೋಟೊ1ಕೆಎಸಟಿ1: ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಪಂ ವ್ಯಾಪ್ತಿಯ ಮದಲಗಟ್ಟಿ ಕೆರೆಯ ದಡದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಶ್ರಮದಾನ ಮಾಡಲಾಯಿತು. | Kannada Prabha

ಸಾರಾಂಶ

ಸ್ವಚ್ಛತೆ ಎಂದರೆ ಕೇವಲ ಮನೆ, ಕಚೇರಿ ಅಥವಾ ವೈಯಕ್ತಿಕ ಸ್ವಚ್ಛತೆಗೆ ಸೀಮಿತವಾದ ವಿಚಾರವಲ್ಲ

ಕುಷ್ಟಗಿ: ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ ಮನಸ್ಥಿತಿ ಪ್ರತಿಯೊಬ್ಬರೂ ಬದಲಿಸಿಕೊಂಡು ಸ್ವಚ್ಛತೆ ಕೇವಲ ಅಭಿಯಾನಕ್ಕೆ ಸೀಮಿತಗೊಳಿಸದೇ ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಭಾಗವನ್ನಾಗಿಸಿಕೊಳ್ಳಬೇಕು. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಾಪಂ ಇಒ ಅಮರೇಶ್ ಕರೆ ನೀಡಿದರು.

ತಾಲೂಕಿನ ಕೊರಡಕೇರಾ ಗ್ರಾಪಂ ವ್ಯಾಪ್ತಿಯ ಮದಲಗಟ್ಟಿ ಕೆರೆಯ ದಡದಲ್ಲಿರುವ ಸಾರ್ವಜನಿಕ ಉದ್ಯಾನವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಚ್ಛತೆ ಎಂದರೆ ಕೇವಲ ಮನೆ, ಕಚೇರಿ ಅಥವಾ ವೈಯಕ್ತಿಕ ಸ್ವಚ್ಛತೆಗೆ ಸೀಮಿತವಾದ ವಿಚಾರವಲ್ಲ. ನಮ್ಮ ಸುತ್ತಲಿನ ಪರಿಸರ, ಸಾರ್ವಜನಿಕ ಸ್ಥಳ, ರಸ್ತೆ, ಉದ್ಯಾನವನ ಹಾಗೂ ಗ್ರಾಮಗಳ ಸ್ವಚ್ಛತೆಯೂ ಅಷ್ಟೇ ಮುಖ್ಯ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಕಾಪಾಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಮನೆಗಳಲ್ಲಿ ಕಸ ವ್ಯವಸ್ಥಿತವಾಗಿ ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಪರಿಸರ ಮಾಲಿನ್ಯ ಉಂಟಾಗುವುದಲ್ಲದೆ, ಸೊಳ್ಳೆ, ನೊಣ ಸೇರಿದಂತೆ ರೋಗ ಹರಡುವ ಕೀಟಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಸ್ವಚ್ಛತೆಯ ವಿಚಾರದಲ್ಲಿ ಪ್ರತಿಯೊಬ್ಬರೂ ಜಾಗರೂಕರಾಗಬೇಕು ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕಸದ ಬುಟ್ಟಿ ಬಳಸುವುದು, ತ್ಯಾಜ್ಯ ವಿಂಗಡಿಸಿ ವಿಲೇವಾರಿ ಮಾಡುವುದು ಹಾಗೂ ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಉದ್ಯಾನವನ ಕೇವಲ ಮನರಂಜನೆಗಾಗಿ ಇರುವ ಸ್ಥಳಗಳಲ್ಲ. ಅವು ಮಕ್ಕಳ ಆಟ, ವೃದ್ಧರ ವಾಯುವಿಹಾರ ಹಾಗೂ ಸಾರ್ವಜನಿಕರ ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಸ್ಥಳಗಳಾಗಿವೆ. ಇಂತಹ ಸಾರ್ವಜನಿಕ ಆಸ್ತಿ ಸ್ವಚ್ಛವಾಗಿ ಹಾಗೂ ಸುಂದರವಾಗಿ ಕಾಪಾಡುವುದು ಗ್ರಾಮಸ್ಥರ ಸಾಮೂಹಿಕ ಜವಾಬ್ದಾರಿಯಾಗಿದೆ ಉದ್ಯಾನವನದ ಆವರಣದಲ್ಲಿ ಕಸ ಹಾಕದಂತೆ ಎಚ್ಚರಿಕೆ ವಹಿಸಬೇಕು. ಉದ್ಯಾನವನ ಸ್ವಚ್ಛವಾಗಿ ಕಾಪಾಡುವುದರ ಜತೆಗೆ ಅದರ ಸುತ್ತಲಿನ ಪರಿಸರ ಹಸಿರಾಗಿಡಲು ಗಿಡ-ಮರ ಬೆಳೆಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ತಿಳಿಸಿದರು.

ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಎಚ್.ಮಾತನಾಡಿ ಸ್ವಚ್ಛತಾ ಕಾರ್ಯ ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ನಿರಂತರವಾಗಿ ನಡೆಸಬೇಕು. ಗ್ರಾಮಗಳ ಸಾರ್ವಜನಿಕ ಸ್ಥಳಗಳು, ಉದ್ಯಾನವನ ಹಾಗೂ ರಸ್ತೆ ಬದಿ ಸ್ವಚ್ಛವಾಗಿಡುವ ಜವಾಬ್ದಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಬ್ಬರದ್ದಾಗಿದೆ ಎಂದು ಹೇಳಿದರು.

ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಜತೆಗೆ, ತಮ್ಮ ಸುತ್ತಮುತ್ತಲಿನ ಜನರಲ್ಲಿಯೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು. ಸ್ವಚ್ಛತಾ ಅಭಿಯಾನ ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಅತ್ಯಗತ್ಯ.ಅಧಿಕಾರಿಗಳು ಕಾರ್ಯಕ್ರಮ ನಡೆಸಿದ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಕಸ ಸಂಗ್ರಹವಾಗದಂತೆ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪಿಎಸ್‌ಐ ಹನುಮಂತಪ್ಪ ತಳವಾರ, ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಮಾನ ಮನಸ್ಕರ ಸಮಿತಿಯ ಸದಸ್ಯರು, ತಾಪಂ ವ್ಯವಸ್ಥಾಪಕ ಶಾಂತವೀರಯ್ಯ, ಟಿಪಿಒ ಸುವರ್ಣ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿಗೌಡ ಜಂಬಲದಿನ್ನಿ, ಕೊರಡಕೇರಾ ಗ್ರಾಪಂ ಪಿಡಿಒ ಶ್ರೀಶೈಲ ಪೋಲೆಸಿ, ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ, ನರೇಗಾ ವಿಭಾಗದ ಸಿಬ್ಬಂದಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ: ರುದ್ರಪ್ಪ ಲಮಾಣಿ
ಗ್ರಾಪಂ ಡಿ ದರ್ಜೆ ನಿವೃತ್ತರಿಗೆ ಉಪಧನ ಮರೀಚಿಕೆ