ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಸೂಚನೆಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಸರ್ಕಾರದ ನಿಯಮದಂತೆ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಕಡ್ಡಾಯವಾಗಿ ಬೇಯಿಸಿದ ಮೊಟ್ಟೆಯನ್ನು ವಿತರಿಸುವಂತೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವಿವಿಧ ಶಾಲೆಗಳಲ್ಲಿ ಮೊಟ್ಟೆ ಬದಲು ಬಾಳೆಹಣ್ಣು, ಚಕ್ಕಿ ವಿತರಿಸುತ್ತಿರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬೇಸರ ತಂದಿದ್ದು, ಈ ಬಾರಿ ಆಗಗದಂತೆ ನೋಡಿಕೊಳ್ಳಬೇಕು, ಇದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಮೂಲಕ ಪ್ರತಿಯೊಂದು ಶಾಲೆಗೂ ಆರಂಭದಲ್ಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಎಂದು ಹೇಳಿದರು.ಈ ವೇಳೆ ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, ಈಗಾಗಲೇ ೨೯ ಅಂಶಗಳ ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ಬಾರಿ ಹೆಚ್ಚು ಫಲಿತಾಂಶಕ್ಕೆ ಒತ್ತು ನೀಡಲಾಗುವುದು ಎಂದರು.
ಕೃಷಿ ಅಧಿಕಾರಿ ಎಚ್.ಉಮೇಶ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ೮೪ ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ೭೮ ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರು ಮೆಕ್ಕೆಜೋಳ ಬೆಳೆಗೆ ಹರಳು ಯೂರಿಯಾ ಬದಲು ನ್ಯಾನೋ ಯೂರಿಯಾ ಬಳಸಿ ಎಂದು ಸಲಹೆ ನೀಡಿದರು.ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕಿರಣ್‌ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಚಿಗಟೇರಿ-ನಿಚ್ಚವನಹಳ್ಳಿ ಬಹುಗ್ರಾಮ ಕುಡಿಯುವ ನೀರು ಪ್ರಗತಿಯಲ್ಲಿದೆ ಎಂದರು. ಆಗ ಶಾಸಕಿ, ಗರ್ಭಗುಡಿಯಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಆರೋಗ್ಯಾಧಿಕಾರಿ ಡಾ. ಪೃಥ್ವಿ ಮಾತನಾಡಿ, ಮಳೆಗಾಲವಾದ್ದರಿಂದ ಗ್ರಾಮಾಂತರ ಪ್ರದೆಶದಲ್ಲಿ ಮಳೆ ನೀರು ನಿಂತು ಹಲವು ಕಾಯಿಲೆಗಳು ಉದ್ಬವಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಗ್ರಾಪಂಯವರು ಜಾಗೃತಿ ವಹಿಸಬೇಕು ಎಂದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಸಜ್ಜಿತ ಮಕ್ಕಳ ಶಸ್ತ್ರಚಿಕಿತ್ಸೆ ಸೇರಿದಂತೆ ಪ್ರತಿ ತಿಂಗಳು ನೂರಕ್ಕೂ ಹೆಚ್ಚು ಮಹಿಳೆಯರು ಹೆರಿಗೆ ಆಗುತ್ತವೆ. ನಮಗೆ ಇನ್ನೊಂದು ೧೦೮ ಆ್ಯಂಬುಲೆನ್ಸ್ ಅವಶ್ಯಕತೆ ಇದೆ ಎಂದು ಹೇಳಿದರು.
ಮಾಚಿಹಳ್ಳಿ, ಮಾಚಿಹಳ್ಳಿತಾಂಡಾ ಮತ್ತು ಗುಂಡಗತ್ತಿ, ತಲವಾಗಲಿನಲ್ಲಿ ರಸ್ತೆ ಬದಿಗಳಲ್ಲಿ ಸಾರ್ವಜನಿಕರು ತಿಪ್ಪೆಗಳನ್ನು ಹಾಕಿಕೊಂಡಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹುಟ್ಟಿಕೊಳ್ಳುತ್ತವೆ. ಇವುಗಳನ್ನು ಕೂಡಲೇ ತೆರವುಗೊಳಿಸಿ ಎಂದು ಶಾಸಕಿ ಲತಾ ಪಿಡಿಒಗಳಿಗೆ ಸೂಚಿಸಿದರು.ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಸಂಬಂಧಿಸಿದಂತೆ ವರದಿ ಮಂಡಿಸಿದರು.
ಈ ಸಂದರ್ಭ ತಹಸೀಲ್ದಾರ ಬಿ.ವಿ. ಗಿರೀಶ್ ಬಾಬು, ತಾಪಂ ಇಒ ವೈ.ಎಚ್. ಚಂದ್ರಶೇಖರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಬಿಇಒ ಎಚ್.ಲೇಪಾಕ್ಷಪ್ಪ, ಎಇಇ ಕುಬೇಂದ್ರನಾಯ್ಕ್, ಜಯಸಿಂಹ, ಸೋಮಶೇಖರ್, ಮಂಜುಳಾ, ಭೀಮಪ್ಪ, ಇಬ್ರಾಹಿಂ, ನಾಗರಾಜ ಸೇರಿದಂತೆ ಪಿಡಿಒಗಳಿದ್ದರು.