ಸಿದ್ದಾಪುರ: ಪತ್ರಿಕೆಗಳನ್ನು ಓದುವುದರಿಂದ ವಿದ್ಯಾರ್ಥಿಗಳು ಭಾಷಾ ಜ್ಞಾನ, ಬರವಣಿಗೆ ಮುಂತಾದ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ ಮಾಲತಿ ಭಟ್ಟ ಹೇಳಿದರು.
ಹಿರಿಯ ಪತ್ರಕರ್ತ, ತಾಲೂಕಿನ ಎಸ್.ಜಿ. ಹೆಗಡೆ ಭತ್ತಗೆರೆ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಎಸ್.ಈ. ಹೆಗಡೆ ಭತ್ತಗೆರೆ, ಪತ್ರಿಕೆ ದಿನವೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನ ಸರಿಯಾಗಿ ನಡೆಯಲು ವೃತ್ತ ಪತ್ರಿಕೆಗಳು ಸಹಾಯ ಮಾಡುತ್ತವೆ. ಪತ್ರಿಕೆಗಳು ನಮ್ಮನ್ನು ಉತ್ತಮ ನಾಗರಿಕರರನ್ನಾಗಿ ಮಾಡುತ್ತದೆ. ಸ್ವಾತಂತ್ರ‍್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಬಹು ಮುಖ್ಯವಾಗಿತ್ತು. ಪತ್ರಿಕೆಗಳಿಂದ ಸ್ವಾತಂತ್ರ‍್ಯ ಹೋರಾಟದಲ್ಲಿ ಹೆಚ್ಚು ಜನರು ಪಾಲ್ಗೊಳ್ಳಲು ಸಹಾಯವಾಯಿತು. ಬೆಂಗಾಲ್ ಗೆಜೆಟ್‌ನಲ್ಲಿ ಭಾರತೀಯರ ಧರ್ಮ ಅವಹೇಳನ ಮಾಡುವಂತಹ ವರದಿಗಳು ಪ್ರಕಟವಾಗುತ್ತಿದ್ದವು. ಅದನ್ನು ಪ್ರತಿಭಟಿಸಲು ನಂತರದ ದಿನಗಳಲ್ಲಿ ಕರ್ನಾಟಕದಲ್ಲಿ ಪತ್ರಿಕೆಗಳು ಪ್ರಾರಂಭಗೊಂಡವು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಬಸವರಾಜ ಪಾಟೀಲ್ ಮಾತನಾಡಿ, ಜನ ಸಾಮಾನ್ಯರಿಗೆ ಪತ್ರಿಕೆಗಳ ಮಹತ್ವ ತಿಳಿಸಲು ಪತ್ರಿಕಾ ದಿನಾಚರಣೆ ನಡೆಸಲಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ಪತ್ರಿಕೆಗಳ ಪರಿಚಯವಿಲ್ಲ. ಇಂದಿನ ಜನತೆ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಆದರೆ ಪತ್ರಿಕೆಗಳನ್ನು ಓದದೆ ಇದ್ದರೆ ಸಾಮಾನ್ಯ ಜ್ಞಾನ ಬರಲು ಸಾಧ್ಯವೇ ಇಲ್ಲ. ಸಮಾಜದಲ್ಲಿನ ಅವ್ಯವಹಾರ, ಭ್ರಷ್ಟಾಚಾರಗಳ ವಿರುದ್ಧ ಹೋರಾಡಲು ಪತ್ರಕರ್ತರ ಜತೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲಬೇಕು ಎಂದರು.ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಹೆಗಡೆ ಮಾತನಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರ ಸಂಘದ ಗಣೇಶ ಭಟ್ಟ ಸ್ವಾಗತಿಸಿದರು. ನಾಗರಾಜ ಭಟ್ಟ ಪ್ರಾಸ್ತಾವಿಕ ಮಾತನಾಡಿದರು, ಸುಜಯ್ ಭಟ್ಟ ಸನ್ಮಾನ ಪತ್ರ ವಾಚಿಸಿದರು. ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಹೆಗಡೆ ವಂದಿಸಿದರು.