ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಕುಲಸಚಿವೆ ಸಲಹೆ
ಸಾಧಕರು ಸಾವಿರಕ್ಕೆ ಒಬ್ಬರು, ವಿದ್ಯಾರ್ಥಿಗಳು ಸಾವಿರಕ್ಕೆ ಒಬ್ಬ ಸಾಧಕರಾಗಬೇಕಾದರೆ ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು ಮುಂತಾದ ದಾರ್ಶನಿಕರನ್ನು ಆದರ್ಶವಾಗಿಟ್ಟುಕೊಂಡು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕೆಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಹೀದಾ ಜಮ್ ಜಮ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ, ಮಧುಗಿರಿ ಟೌನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರಿಗೆ ಯಾವುದೇ ಹೋರಾಟ ಮಾಡದೆಯೇ ಮತದಾನ ಮತ್ತು ಎಲ್ಲಾ ರೀತಿಯ ಸ್ವಾತಂತ್ರ್ಯದ ಸಿಕ್ಕಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ. ಇದನ್ನು ಈ ನೆಲದ ಹೆಣ್ಣು ಮಕ್ಕಳು ಮರೆಯದೇ ಆದರ್ಶಯುತ ಜೀವನ ರೂಪಿಸಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರ ಜೊತೆಗೆ ಕರ್ನಾಟಕ ಸರ್ಕಾರದ ಆಶಯದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ವಿವಿಧ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಪಠ್ಯೇತರ ಚಟುವಟಿಕೆಗಳಾದ ಪ್ರಬಂಧ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಕವನ ವಾಚನ ಮುಂತಾದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಿ ಸಮಾಜದ ಸಮಸ್ಯೆಗಳನ್ನು ಅರ್ಥೈಸಿ ಅಂಬೇಡ್ಕರ್ ಅವರ ಆಶಯಗಳನ್ನು ತಿಳಿಸುವುದೇ ಆಗಿದೆ ಎಂದರು.