ಕುಷ್ಟಗಿ: ಭಾರತ ಚುನಾವಣಾ ಆಯೋಗವು ದೇಶಾದ್ಯಂತ ಏಕಕಾಲಕ್ಕೆ ಹಮ್ಮಿಕೊಂಡಿರುವ ವಿಶೇಷ ಮತದಾರರ ಸಮಗ್ರ ಪರಿಷ್ಕರಣೆ ಜೂ.30ರಿಂದ ಆರಂಭವಾಗುತ್ತಿದ್ದು, ಬೂತ್ ಮಟ್ಟದ ಅಧಿಕಾರಿ, ಮೇಲ್ವಿಚಾರಕರು ಕಾಳಜಿ ಪೂರ್ವಕವಾಗಿ ಮಾಹಿತಿ ಪಡೆಯುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ ಗುರುರಾಜ ಚಲವಾದಿ ಹೇಳಿದರು.
ಚುನಾವಣಾ ಆಯೋಗದ ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ತಾಲೂಕಿನ ಎಲ್ಲ ಮತಗಟ್ಟೆಯ ಅಧಿಕಾರಿಗಳಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ಕಾಲ ತರಬೇತಿ ತಾಪಂ ಸಭಾಂಗಣದಲ್ಲಿ ನೀಡಲಾಗುತ್ತಿದ್ದು, ಎಲ್ಲ ಮಾಹಿತಿ ಪಡೆದುಕೊಳ್ಳಬೇಕು. ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳು ಜವಾಬ್ದಾರಿಗಳು ಅತ್ಯಂತ ಜವಾಬ್ದಾರಿಯುತವಾಗಿದೆ.
ಎಣಿಕೆ ನಮೂನೆ ಎಲ್ಲ ಮತದಾರರಿಗೆ ಮನೆ ಮನೆ ಭೇಟಿ ನೀಡಿ ಮತದಾರರ ಸಹಿಯೊಂದಿಗೆ ಅಂದೇ ಅಪಲೋಡ್ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾರರ ಮಾಹಿತಿ, ಹೆಸರು ಬಿಟ್ಟು ಹೋಗದಂತೆ ಅರ್ಹ ಮತದಾರ ಮತದಾರ ಪಟ್ಟಿಯಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದರು.ಸಂಪನ್ಮೂಲ ವ್ಯಕ್ತಿ ಕಿಶನರಾವ್ ಕುಲಕರ್ಣಿ ಮಾಹಿತಿ ನೀಡಿ, ಈಗಾಗಲೆ ಮ್ಯಾಪಿಂಗ್ ಹಾಗೂ ಪ್ರೋಜನಿಂಗ್ ಕಾರ್ಯ ಮುಗಿದಿದೆ. ಸ್ಥಳಾಂತರ, ವಲಸೆ, ಮರಣ, ನಕಲು ಮತದಾರರ ಹೆಸರುಗಳು ಪಟ್ಟಿಯಲ್ಲೂ ನುಸುಳದಂತೆ ಕಾಪಾಡುವುದರ ಜತೆಗೆ ಗೌಪ್ಯತೆ ಕಾಪಾಡಬೇಕು. ಮ್ಯಾಪಿಂಗ್ ಆಗದವರ ಅಗತ್ಯ ದಾಖಲೆ ಪಡೆದುಕೊಂಡು ಪೂರ್ಣಗೊಳಿಸಿ ಎಂದು ಹೇಳಿದರು.