ಕನ್ನಡಪ್ರಭ ವಾರ್ತೆ ಭಟ್ಕಳ
ಮತದಾರರ ಪಟ್ಟಿಯನ್ನು ನಿಖರ, ಪಾರದರ್ಶಕ ಹಾಗೂ ದೋಷರಹಿತವಾಗಿ ಸಿದ್ಧಪಡಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಸಿಬ್ಬಂದಿ ನಡುವೆ ಸಮನ್ವಯ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಸಹಕಾರ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದರು.
ಹೊಸ ಮತದಾರರ ಹೆಸರು ಸೇರ್ಪಡೆ, ಮತದಾರರ ವಿವರಗಳ ತಿದ್ದುಪಡಿ, ಸ್ಥಳಾಂತರಗೊಂಡಿರುವ ಮತದಾರರ ಮಾಹಿತಿಯ ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದು, ಬಿಎಲ್‌ಒಗಳು ಸಹ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವ ಮೂಲಕ ಸಹಕರಿಸಬೇಕೆಂದು ಸೂಚಿಸಲಾಯಿತು.ಮತದಾರರ ಪಟ್ಟಿಯ ಗುಣಮಟ್ಟ ಹೆಚ್ಚಿಸುವಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಭೆಯಲ್ಲಿ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಚುನಾವಣೆ ವಿಭಾಗದ ಶಿರಸ್ತೇದಾರ ರಾಧಿಕಾ ಶಾಸ್ತ್ರಿ, ಕಚೇರಿ ಸಿಬ್ಬಂದಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಪಕ್ಷಗಳ ಮುಖಂಡರು ತಮ್ಮ ಸಲಹೆ ಹಾಗೂ ಅಭಿಪ್ರಾಯ ಹಂಚಿಕೊಂಡರು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸುವಂತೆ ಅಧಿಕಾರಿಗಳು ಹೇಳಿದರು.