ಪ್ರಸಕ್ತ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆ ಯಶಸ್ವಿಗೊಳಿಸಿ

KannadaprabhaNewsNetwork | Published : May 14, 2025 1:47 AM
ಫೋಟೋ 13ಬಿಕೆಟಿ2, ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ) | Kannada Prabha

ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸಕ್ತ ಸಾಲಿನ ಸಾಮಾಜಿಕ ಲೆಕ್ಕಪರಿಶೋಧನೆ ಕಾರ್ಯ ಯಶಸ್ವಿಗೊಳಿಸಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅನುಷ್ಠಾನ ಅಧಿಕಾರಿಗಳಿಗೆ ಕರೆ ನೀಡಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಜಿಪಂ ಸಹಯೋಗದಲ್ಲಿ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಯ ಅಧ್ಯಕ್ಷತೆ ವಹಿಸುವ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಪರಿಶೋಧನೆ ಅನುಷ್ಠಾನ ಕಾಮಗಾರಿಗಳ ಕಡತಗಳನ್ನು ನಿಗದಿತ ಸಮಯದಲ್ಲಿ ಒದಗಿಸುವುದು ಕಡ್ಡಾಯವಾಗಿದ್ದು, ನಿಗದಿತ ಅವಧಿಯಲ್ಲಿ ಬರದೇ ಇದ್ದಲ್ಲಿ ವಸೂಲಾತಿಗೆ ಕ್ರಮಕೈಗೊಳ್ಳುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅನುಷ್ಠಾನ ಕಾರ್ಯದ ಪೂರ್ವದಲ್ಲಿ ಅದಕ್ಕೆ ಅನುಗುಣವಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಸಭೆಗೆ ಸೂಚಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಜರಾಗುವವರು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಸೂಚಿಸಿದರು.

ಕಳೆದ 2024-25ನೇ ಸಾಲಿನ ಸಾಮಾಜಿಕ ಪರಿಶೋಧನೆ ಕಾರ್ಯ ಪ್ರಾರಂಭಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಅನುಷ್ಠಾನ ಕಾರ್ಯ ಜೂನ್‌ನಿಂದ ವೇಳಾಪಟ್ಟಿಗೆ ಅನುಗುಣವಾಗಿ ಪ್ರಾರಂಭವಾಗಲಿದೆ ಎಂದರು. ತರಬೇತಿಯಲ್ಲಿ ಮಹಾತ್ಮಾಗಾಂಧಿ ಎನ್‌ಆರ್‌ಇಜಿಎ ಕುರಿತು ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ತರಬೇತಿ ನೀಡಿದರೆ, ರಾಜ್ಯ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಪರಿಶೋಧನೆ ಕುರಿತು ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ತರಬೇತಿ ನೀಡಿದರು.

15ನೇ ಹಣಕಾಸು ಆಯೋಗದ ಅನುದಾನ ಸಾಮಾಜಿಕ ಪರಿಶೋಧನೆ ಕುರಿತು ಮುಖ್ಯ ಯೋಜನಾಧಿಕಾರಿ ಪುನಿತ್ ಆರ್ ವಿವರವಾಗಿ ತಿಳಿಸಿಕೊಟ್ಟರು. ಸಮಗ್ರ ಶಿಕ್ಷಣ ಮತ್ತು ಎಂಡಿಎಂ ಯೋಜನೆಯ ಸಾಮಾಜಿಕ ಪರಿಶೋಧನೆ ಕುರಿತು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ, ಹಾಗೂ ಸಾಮಾಜಿಕ ಪರಿಶೋಧನೆ, ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿರುವ ನೋಡಲ್ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಸಾಮಾಜಿಕ ಪರಿಶೋಧನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಔರಸಂಗ ತರಬೇತಿ ನೀಡಿದರು.